

ಬೆಂಗಳೂರು: ಕರೊನಾ ಸಂಕಷ್ಟದ ಸಂದರ್ಭದಲ್ಲೇ ರಾಜ್ಯದ ಅನ್ನದಾತರಿಗೊಂದು ಸಿಹಿ ಸುದ್ದಿ ಲಭ್ಯವಾಗಿದೆ. ತಮ್ಮ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಸೌಲಭ್ಯ ಸಿಗದಿದ್ದಲ್ಲಿ ರೈತರು ಕೃಷಿಯಿಂದಲೇ ಹಿಮ್ಮುಖರಾಗಬಹುದೆಂಬ ಆತಂಕವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಮುಂದಿನ ವರ್ಷ ತಾಲೂಕಿಗೊಂದು ಜನತಾ ಬಜಾರ್ ರೂಪಿಸಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಚಿಂತನೆ ನಡೆಸಿದೆ.
ಪರಿಣಾಮ ವ್ಯವಸಾಯದ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವ ಸ್ಥಿತಿಗೆ ರೈತರು ತಲುಪಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಕರೊನಾದಿಂದ ಆಗಿರುವ ಸಮಸ್ಯೆಗಿಂತ ನೂರು ಪಟ್ಟು ಹೆಚ್ಚಿನ ತೊಂದರೆ ಆಗಬಹುದೆಂಬುದು ತಜ್ಞರ ಅಭಿಪ್ರಾಯ.
ಎಷ್ಟು ಉತ್ಪನ್ನ ರೈತರಲ್ಲಿದೆ?
ಪ್ರತಿ ವರ್ಷ ಜನವರಿಯಿಂದ ಏಪ್ರಿಲ್ವರೆಗೆ ಎಪಿಎಂಸಿ ಮೂಲಕ ಮಾರಾಟವಾಗುವ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಲ್ಲಿ ಸರಾಸರಿ ಶೇ. 70 ರೈತರಲ್ಲೇ ಉಳಿದಿದೆ. ತೊಗರಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.77 ಮಾರುಕಟ್ಟೆಗೆ ಬಂದಿದೆ. ಬಹಳಷ್ಟು ಬೆಳೆಗಳನ್ನು ರೈತರು ಹೊಲದಲ್ಲಿಯೇ ನಾಶ ಮಾಡುತ್ತಿದ್ದಾರೆ. ಕಳೆದ ವರ್ಷ ಜನವರಿಯಿಂದ ಏಪ್ರಿಲ್ 2ನೇ ವಾರದ ಅವಧಿಯಲ್ಲಿ 27 ಲಕ್ಷ ಟನ್ ಭತ್ತ ಮಾರುಕಟ್ಟೆಗೆ ಬಂದಿತ್ತು. ಈ ವರ್ಷ ಕೇವಲ 8 ಲಕ್ಷ ಟನ್ ಮಾತ್ರ ಬಂದಿದೆ. ಅದೇ ರೀತಿ ರಾಗಿ 90 ಸಾವಿರ ಕ್ವಿಂಟಾಲ್ ಬಂದಿದ್ದರೆ, ಈ ವರ್ಷ ಶೇ.24 ಮಾತ್ರ ಬಂದಿದೆ ಎಂಬುದು ಒಂದು ಅಂಕಿಅಂಶ.
ಆಂಧ್ರದಲ್ಲಿ ಏನಾಗಿದೆ?
ಆಂಧ್ರಪ್ರದೇಶದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಹಾಗೂ ಕೃಷಿ ಮಾರುಕಟ್ಟೆ ಇಲಾಖೆಗಳು ಜಂಟಿಯಾಗಿ 22 ಸಾವಿರ ಜನತಾ ಬಜಾರ್ಗಳನ್ನು ತೆರೆಯಲು ಮುಂದಾಗಿವೆ. ರೈತರೇ ಅಲ್ಲಿ ಮಾರಾಟಗಾರರು. ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ಶುಲ್ಕ ಕಟ್ಟಿ ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. ಹಳ್ಳಿ, ಪಟ್ಟಣ, ನಗರ ಪ್ರದೇಶಗಳಲ್ಲೂ ಜನತಾ ಬಜಾರ್ ತಲೆ ಎತ್ತಲಿವೆ.
ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಲಾಗಿದೆ. ಆದ್ದರಿಂದ ರೈತರು ಸಾಗಾಟ ಮಾಡಬಹುದು. ಮುಂದಿನ ವರ್ಷದ ಮುಂಗಾರಿಗಾಗಿ ಸಿದ್ಧತೆ ಮಾಡುತ್ತಿದ್ದೇವೆ. -ಬಿ.ಸಿ. ಪಾಟೀಲ್ ಕೃಷಿ ಸಚಿವ ರೈತರಲ್ಲಿ ಭರವಸೆ ತುಂಬುವ ಪ್ರಯತ್ನವನ್ನು ಸರ್ಕಾರ ಮಾಡದಿದ್ದರೆ ಕರೊನಾದಿಂದ ಆಗಿರುವ ಹಾನಿಗಿಂತ ಹೆಚ್ಚಿನ ನಷ್ಟ ಆಗುವ ಅಪಾಯವಿದೆ. ಸರ್ಕಾರ 500 ಕೋಟಿ ರೂ.ವೆಚ್ಚ ಮಾಡಿದರೆ ರೈತರಲ್ಲಿರುವ ಉತ್ಪನ್ನ ದಾಸ್ತಾನು ಮಾಡಿ ಅಡಮಾನ ಸಾಲ ನೀಡಬಹುದು. - ಡಾ. ಪ್ರಕಾಶ್ ಕಮ್ಮರಡಿ ಮಾಜಿ ಅಧ್ಯಕ್ಷ, ಕೃಷಿ ಬೆಲೆ ಆಯೋಗ ಮುಂದಿನ ಮುಂಗಾರಿಗೆ ಹೂಡಿಕೆ ಮಾಡಲು ರೈತರಲ್ಲಿ ಹಣ ಇಲ್ಲ. ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಇಲ್ಲದಿದ್ದರೆ ಆಹಾರದ ಭದ್ರತೆಗೆ ಅಪಾಯವಾಗುತ್ತದೆ. ರೈತರ ಮನಸ್ಸಿನ ಮೇಲೆ ಹೊಡೆತ ಬೀಳದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕು. -ಡಾ. ಎಂ.ಬಿ. ರಾಜೇಗೌಡ ಕೃಷಿ ಹವಾಮಾನ ತಜ್ಞ
ರಾಜ್ಯದಲ್ಲಿ ಏನಿದೆ ಚಿಂತನೆ? ಜನತಾ ಬಜಾರ್ಗಳನ್ನು ತಕ್ಷಣ ಆರಂಭಿಸಲು ಸಾಧ್ಯವಿಲ್ಲ ವಾದ್ದರಿಂದ ಸದ್ಯದ ಮಟ್ಟಿಗೆ ವಿಶಾಲ ಮೈದಾನಗಳನ್ನು ನೋಡಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದು, ರೈತರಿಗೆ ಉತ್ಪನ್ನಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸುವುದು. ಮುಂದಿನ ವರ್ಷ ಆಂಧ್ರಪ್ರದೇಶದಲ್ಲಿ ಜನತಾ ಬಜಾರ್ಗಳನ್ನು ಅಧ್ಯಯನ ಮಾಡಿದ ಬಳಿಕ ರಾಜ್ಯದಲ್ಲೂ ಪ್ರಾರಂಭ ಮಾಡಬೇಕೆಂಬುದು ಸರ್ಕಾರದ ಆಲೋಚನೆಯಾಗಿದೆ.
ಮುಂದಿನ ವರ್ಷ ತಾಲೂಕಿಗೆ ಒಂದರಂತೆ ಜನತಾ ಬಜಾರ್ ಮಾಡುವ ಬಗ್ಗೆ ಆಂಧ್ರಪ್ರದೇಶದಿಂದ ಮಾಹಿತಿ ಪಡೆಯಲಾಗುತ್ತದೆ. ಅಲ್ಲಿಯ ತನಕ ವಿಶಾಲ ಮೈದಾನದಲ್ಲಿ ಮಾರು ಕಟ್ಟೆಗೆ ಅವಕಾಶ ಕಲ್ಪಿಸಲಾಗುತ್ತದೆ. | ಎಸ್.ಟಿ. ಸೋಮಶೇಖರ್ ಸಹಕಾರ ಸಚಿವ
ತಜ್ಞರ ಸಲಹೆ
ಬೀಳು ಭೂಮಿ ಹೆಚ್ಚಳ
ರಾಜ್ಯದಲ್ಲಿ ಸದ್ಯ ಶೇ.21 ಭೂಮಿ ಬೀಳು ಬಿದ್ದಿದೆ. ರೈತರು ಆಸಕ್ತಿ ಕಳೆದುಕೊಂಡರೆ ಈ ಪ್ರಮಾಣ ಶೇ. 50ಕ್ಕೆ ಆಗಬಹುದು. ಆ ರೀತಿಯಾದರೆ ಆಹಾರ ಭದ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೃಷಿ ತಜ್ಞರು ಆತಂಕ ವ್ಯಕ್ತಪಡಿಸುತ್ತಾರೆ.
| ರುದ್ರಣ್ಣ ಹರ್ತಿಕೋಟೆ