

ಹುಬ್ಬಳ್ಳಿ: ಕಳಸಾ-ಬಂಡೂರಿ ನಾಲಾ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಮಾಹಿತಿ ನೀಡಿದೆ. ಮಂಡಳಿ ಯಾವುದೇ ಹೆಚ್ಚಿನ ಮಾಹಿತಿ ಕೇಳಿಲ್ಲ. ಕೇಂದ್ರ ಸರ್ಕಾರ ಕುಂಟು ನೆಪ ಮಾಡುವುದನ್ನು ಬಿಟ್ಟು ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಗೆ ಅಗತ್ಯ ಅನುಮತಿ ನೀಡಬೇಕು ಎಂದು ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಮೋಹನ ಲಿಂಬಿಕಾಯಿ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 31ರಂದು ವನ್ಯಜೀವಿ ಮಂಡಳಿಯ ಸಭೆ ನಡೆದಿದೆ. ಸಭೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಮಾಹಿತಿ ನೀಡಿದೆ. ಅಲ್ಲಿಂದ ಇಲ್ಲಿಯವರೆಗೂ ವನ್ಯಜೀವಿ ಮಂಡಳಿ ಹೆಚ್ಚಿನ ಮಾಹಿತಿ ಕೇಳಿಲ್ಲ. ನೀಡಿರುವ ಮಾಹಿತಿಯಲ್ಲಿ ಕೊರತೆ ಇದೆ ಎಂದೂ ಹೇಳಿಲ್ಲ. ಸಭೆಗೆ ಪೂರ್ವ ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ ತಂಡ ಯೋಜನೆಯಿಂದ ಕಳಸಾ ಬಳಿಯ ಟೈಗರ್ ಕಾರಿಡಾರ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅಭಿಪ್ರಾಯಿಸಿದೆ ಎಂದರು.
ಗೋವಾ ಸರ್ಕಾರ ಟೈಗರ್ ಕಾರಿಡಾರ್ ಬರುತ್ತದೆ ಎಂದು ತಕರಾರು ಮಾಡಿದೆ. ಲೋಕಸಭೆ ಚುನಾವಣೆ ಘೊಷಣೆ ಪೂರ್ವ ಈ ಭಾಗದ (ಯೋಜನಾ ಪ್ರದೇಶ ವ್ಯಾಪ್ತಿಯ) ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಿ ಕಳಸಾ-ಬಂಡೂರಿ ನಾಲಾ ಯೋಜನೆಗೆ ಅನುಮತಿ ಪಡೆಯಬೇಕು. ಕಳಸಾ ಮತ್ತು ಬಂಡೂರಿಯಲ್ಲಿ ಎರಡು ಮಿನಿ ಡ್ಯಾಮ್ ನಿರ್ಮಾಣ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಸರಿಯಾಗಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ಕುಂಟು ನೆಪ ಹೇಳುವುದು ಬೇಡ ಎಂದು ಹೇಳಿದರು.