ಆರ್ಥಿಕ ದಿವಾಳಿಯಾದ ರಾಜ್ಯ ಸರ್ಕಾರ,   ಔಷಧಿ ಖರೀದಿಗೂ ಇವರಿಗೆ ಹಣವಿಲ್ಲ,  ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕೆ

Published on

ಹುಬ್ಬಳ್ಳಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲದೇ ಸಾರ್ವಜನಿಕರು ಪರದಾಡುತ್ತಿದ್ದಾರೆ. ವೈದ್ಯರು ಹೊರಗಡೆಯಿಂದ ಔಷಧಿ ತರಲು ಚೀಟಿ ಬರೆದು ಕೊಡುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬೊಕ್ಕಸ ಬರಿದಾಗಿದೆ. ಗುಣಮಟ್ಟದ ಔಷಧಿ ಖರೀದಿ ಮಾಡಲು ಸರ್ಕಾರಕ್ಕೆ ಆಗುತ್ತಿಲ್ಲ. ಕಳಪೆ ಔಷಧಿ ಪೂರೈಕೆಯಿಂದಾಗಿ ಆಸ್ಪತ್ರೆಗಳಲ್ಲಿ ಅವಘಡಗಳು ಸಂಭವಿಸುತ್ತಿವೆ ಎಂದರು.

ಗುಣಮಟ್ಟದ ಕಂಪನಿಗಳಿಂದ ಔಷಧಿ ಖರೀದಿಸಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ ಸಿಕ್ಕ ಸಿಕ್ಕ ಕಂಪನಿಗಳಿಂದ ಔಷಧಿ ಖರೀದಿಸಿದ ಪರಿಣಾಮ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿವೆ ಎಂದು ಆರೋಪಿಸಿದರು.

ಆರೋಗ್ಯ ಸಚಿವರಿಗೆ ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ಹಾಗೆ ಪ್ರಕರಣದ ಗಂಭೀರತೆ ಈಗ ಅರಿತಿದ್ದಾರೆ. ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಆರೋಗ್ಯ ಸಚಿವರು ಸಂರ್ಪೂಣ ವೈಫಲ್ಯ ಕಂಡಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ತೋರುತ್ತಿದ್ದಾರೆ ಎಂದು ದೂರಿದರು.

ಐವಿ ದ್ರಾವಣಕ್ಕೆ ಕೇಂದ್ರ ಅನುಮತಿ ನೀಡಿದೆ ಎನ್ನುತ್ತಿದ್ದಾರೆ. ಆದರೆ, ಕೇಂದ್ರದ ಅನುಮತಿ ಪಡೆಯುವಾಗ ಗುಣಮಟ್ಟದ ಔಷಧಿ ಕಳಿಸಿ ನಂತರದಲ್ಲಿ ಕಳಪೆ ಗುಣಮಟ್ಟದ ಔಷಧಿ ಪೂರೈಸಿದ್ದರೆ ಯಾರು ಹೊಣೆ? ರಾಜ್ಯ ಸರ್ಕಾರ ಆಗಾಗ ತಪಾಸಣೆ ನಡೆಸಬೇಕಲ್ಲವೇ ಎಂದು ಸಚಿವ ಜೋಶಿ ಪ್ರಶ್ನಿಸಿದರು.

ಮುಂದುವರಿದ ಮೆಡಿಕಲ್ ಸೈನ್ಸ್ ಯುಗದಲ್ಲಿ ಬಾಣಂತಿಯರ ಸಾವು ಎಂದರೆ ನಾಚಿಕೆಗೇಡಿನ ಸಂಗತಿ. ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ಇರುವುದಕ್ಕೆ ಈ ರೀತಿ ಆಗುತ್ತಿವೆ ಎಂದು ಜೋಶಿ ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net