ಕೃಷಿ ಸಚಿವರಾಗಲು ಚೆಲುವರಾಯಸ್ವಾಮಿ ಯೋಗ್ಯರಲ್ಲ,  ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಡಹಳ್ಳಿ ಹೇಳಿಕೆ

IMG-20250729-WA0010.jpg
Published on

ಹುಬ್ಬಳ್ಳಿ: ಸಮರ್ಪಕವಾಗಿ ಹಂಚಿಕೆ ಮಾಡಲಾಗದೇ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಲಾಗಿದೆ. ಕಾಳಸಂತೆಯಲ್ಲಿ ಮಾರಾಟ ಮಾಡಲು ಸುಮಾರು 2.50 ಲಕ್ಷ ಮೆಟ್ರಿಕ್ ಟನ್ ಸಂಗ್ರಹಿಸಿದ್ದಾರೆ. ರಾಜ್ಯದಲ್ಲಿ ರೈತರ ಸಮಸ್ಯೆ ಅರಿಯದ, ಯಾವ ಕಾಲಕ್ಕೆ ಏನು ಬೇಕು ಎಂಬುದನ್ನೂ ತಿಳಿಯದ ಎನ್. ಚೆಲುವರಾಯಸ್ವಾಮಿ ಅವರು ಕೃಷಿ ಸಚಿವರಾಗಿರಲು ಯೋಗ್ಯರಲ್ಲ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ ಆರಂಭವಾಗಿದೆ. ಜುಲೈ 30ರಂದು ರಾಜ್ಯದ ಎಲ್ಲ ಜಿಲ್ಲಾಡಳಿತ ಕಚೇರಿ ಎದುರು ಗೊಬ್ಬರ ಗೊಂದಲದ ವಿರುದ್ಧ ಹೋರಾಟ ನಡೆಯಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಶಾಸಕರೊಂದಿಗೆ ಒನ್ ಟು ಒನ್ ಸಭೆ ಮಾಡುತ್ತಿದ್ದಾರೆ. ಆದರೆ, ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಕರೆದು ಮಾತನಾಡಲು ಇವರಿಗೆ ಸಮಯ ಇಲ್ಲ. ರೈತರಿಗಿಂತ ಇವರಿಗೆ ತಮ್ಮ ಅಧಿಕಾರ ಮುಖ್ಯವಾಗಿದೆ ಎಂದರು.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೇಳಿದ್ದ 12.95 ಲಕ್ಷ ಮೆಟ್ರಿಕ್ ಟನ್ ಪೈಕಿ ಈಗಾಗಲೇ 11.17 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಸಿದೆ. ಜುಲೈನಲ್ಲಿ ನೀಡಿದ 8.73 ಲಕ್ಷ ಮೆಟ್ರಿಕ್ ಟನ್ ನಲ್ಲಿ 7.73 ಲಕ್ಷ ಮೆಟ್ರಿಕ್ ಟನ್ ರೈತರಿಗೆ ನೀಡಿದೆ. ಗೊಬ್ಬರ ಇದ್ದರೂ ಎಲ್ಲ ಕಡೆ ನೋ ಸ್ಟಾಕ್ ಬೋರ್ಡ್ ಬಂದಿದೆ. ಈ ಮಧ್ಯೆ ಕೇಂದ್ರ ಸಚಿವ ಜೋಶಿ ಅವರು ಹೆಚ್ಚುವರಿ ಗೊಬ್ಬರಕ್ಕಾಗಿ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಆದರೆ, ರಾಜ್ಯದಲ್ಲಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುವ ಜಾಲವಿದೆ. ಕೆಲವೆಡೆ ಸಬ್ಸಿಡಿ ದರದ ಗೊಬ್ಬರವನ್ನು ಕೈಗಾರಿಕೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆಯುತ್ತಿದೆ. ಆಡಳಿತ ವರ್ಗ ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದರು.

ಕೃಷಿ ಸಚಿವ ಚೆಲುವರಾಯಸ್ವಾಮಿ ಮಂಡ್ಯ ಬಿಟ್ಟು ರಾಜ್ಯದ ಯಾವುದೇ ಜಿಲ್ಲೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿಲ್ಲ. ಕೊಪ್ಪಳದಲ್ಲಿ ಚಂದ್ರಪ್ಪ ಎನ್ನುವ ರೈತ ಸರದಿಯಲ್ಲಿ ನಿಂತಾಗಲೂ ಗೊಬ್ಬರ ಸಿಗದಿದ್ದಾಗ ಮಣ್ಣು ತಿಂದಿದ್ದಾನೆ. ಇದರರ್ಥ ಸರ್ಕಾರ ರೈತರಿಗೆ ಮಣ್ಣು ತಿನ್ನಿಸುತ್ತಿದೆ. ಕೇಂದ್ರ ಕೊಟ್ಟಿರುವ ಗೊಬ್ಬರವನ್ನು ಸರಿಯಾಗಿ ಹಂಚುವುದಕ್ಕೂ ಆಗದ ಮೂರ್ಖತನ ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕ್ಷೇತ್ರದಲ್ಲಿಯೂ ಗೊಬ್ಬರದ ಅಭಾವ ಇದೆ. ಸಚಿವರು ಏನು ಮಾಡುತ್ತಿದ್ದಾರೆ? ಇಂತಹ ಅವ್ಯವಸ್ಥೆ ವಿರುದ್ಧ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಯಲಿದೆ. ಆಗಸ್ಟ್ 1ಕ್ಕೆ ಕೊಪ್ಪಳ ಬಂದ್ ನಡೆಯಲಿದೆ ಎಂದರು.

ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕುಮಾರಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ಶಶಿಮೌಳಿ ಕುಲಕರ್ಣಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net