

ಸೋಮವಾರಪೇಟೆ: ರಾಜ್ಯ ಸರ್ಕಾರ ಢೋಂಗಿ ಪರಿಸರವಾದಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಆ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದರು.
ಕೊಡವ ಸಮಾಜದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಬಿಜೆಪಿ ಕಾನೂನು ಪ್ರಕೋಷ್ಠದ ಸಭೆಯಲ್ಲಿ ಮಾತನಾಡಿದ ಅವರು, ಸಿ ಆ್ಯಂಡ್ ಡಿ ಜಾಗದ ಸಮಸ್ಯೆ ಸೇರಿದಂತೆ ಕಸ್ತೂರಿರಂಗನ್ ವರದಿ ಜಾರಿ ವಿಚಾರವಾಗಿ ಬಿಜೆಪಿ ಹೋರಾಟ ಮಾಡಲಿದೆ. ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರು ಹೋರಾಟಕ್ಕೆ ಕೈಜೋಡಿಸಬೇಕೆಂದು ಹೇಳಿದರು.
ಸಿ ಆ್ಯಂಡ್ ಡಿ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಪಕ್ಷದ ವತಿಯಿಂದಲೇ ವಕೀಲರನ್ನು ನೇಮಿಸಲಾಗುವುದು. ಸಿ ಆ್ಯಂಡ್ ಡಿ ಜಾಗದಲ್ಲಿ ಕೃಷಿ ಮಾಡಿರುವ ರೈತರು ಕಂದಾಯ ಇಲಾಖೆಗೆ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿಯ ನಕಲು ಪ್ರತಿ, ವೈಯಕ್ತಿಕ ಅರ್ಜಿ ಸೇರಿದಂತೆ ಇತರ ಪೂರಕ ದಾಖಲಾತಿಗಳನ್ನು ಸಲ್ಲಿಸಬೇಕು. ಕಾನೂನು ಪ್ರಕೋಷ್ಠದ ಸದಸ್ಯರು ಪ್ರತಿ ಗ್ರಾಮಕ್ಕೆ ತೆರಳಿ ಸ್ಥಳೀಯರೊಂದಿಗೆ ಈ ಬಗ್ಗೆ ಚರ್ಚಿಸಿ ತಿಳಿವಳಿಕೆ ನೀಡಬೇಕು ಎಂದರು.
ಸಭೆಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಮನ್ಯುಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಪಂ ಮಾಜಿ ಸದಸ್ಯ ಬಿ.ಜೆ.ದೀಪಕ್, ಹಿರಿಯ ವಕೀಲರಾದ ಗಣಪತಿ, ಬಿಜೆಪಿ ಮಂಡಲ ಅಧ್ಯಕ್ಷ ಗೌತಮ್ ಗೌಡ ಸೇರಿದಂತೆ ಇತರರು ಇದ್ದರು.