

ಶಿವಮೊಗ್ಗ: ಕೃಷಿ ಇಲಾಖೆ ಹಾಗೂ ಎಸ್‌ಸಿಪಿ-ಟಿಎಸ್‌ಪಿಗೆ ಮೀಸಲಿರಿಸಿದ್ದ ಅನುದಾನವನ್ನು ಗ್ಯಾರಂಟಿ ಜಾರಿಗೆ ಸರ್ಕಾರ ಬಳಕೆ ಮಾಡಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ನಿಗಮಗಳಿಗೆ ಮೊದಲ ತಿಂಗಳೇ ಪೂರ್ಣ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಹೀಗೆಯೇ ನಡೆದರೆ ಹೆಚ್ಚು ದಿನ ಇರುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಇನ್ನು ಒಂದೆರಡು ತಿಂಗಳು ಕಳೆದರೆ ಬಸ್‌ಗಳಿಗೆ ಡೀಸೆಲ್ ಒದಗಿಸಲು, ಸಿಬ್ಬಂದಿಗೆ ವೇತನ ನೀಡಲು ಹಣವಿಲ್ಲ ಎನ್ನುವ ಸ್ಥಿತಿ ಬರುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಯಾರೂ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳುವುದಿಲ್ಲ. ಕೆಲವರು ಅಸಮಾಧಾನಗೊಂಡಿರುವುದು ನಿಜ. ಅಂತಹವರೊಂದಿಗೆ ನಮ್ಮ ಹಿರಿಯರು ಮಾತನಾಡುತ್ತಾರೆ. ಕೆಲವು ಮಾಜಿ ಸಚಿವರು, ಶಾಸಕರು ಬಿಜೆಪಿ ತೊರೆಯುತ್ತಾರೆ ಎಂಬುದು ಕಾಂಗ್ರೆಸ್‌ನವರು ಹಬ್ಬಿಸುತ್ತಿರುವ ವದಂತಿ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಅಧಿಕಾರ ನಡೆಸಲು ಅಸಮರ್ಥವಾಗಿದೆ. ಅನೇಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದರಿಂದ ಜನರ ಗಮನ ಬೇರೆ ಕಡೆಗೆ ಸೆಳೆಯಲು ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಲವಿದ್ಯುತ್ ಉತ್ಪಾದನೆಗೆ ನೀರಿನ ಕೊರತೆ. ಥರ್ಮಲ್ ವಿದ್ಯುತ್‌ಗೆ ಕಲ್ಲಿದ್ದಲು ಅಭಾವ. ಮಳೆಯಿಲ್ಲದೇ ಒಣಗುತ್ತಿರುವ ಬೆಳೆ ರಕ್ಷಣೆಗೆ ಪಂಪ್‌ಸೆಟ್ ಬಳಕೆ ಮಾಡಲು ಲೋಡ್ ಶೆಡ್ಡಿಂಗ್. ಇದರ ನಡುವೆ ಉಚಿತ ವಿದ್ಯುತ್ ಬೇರೆ. ಇದೊಂದು ನಾಗರಿಕ ಸರ್ಕಾರ ನಡೆದುಕೊಳ್ಳುವ ರೀತಿಯೇ ಎಂದು ಕಿಡಿಕಾರಿದರು. ಕಲ್ಲಿದ್ದಲು ಕಂಪನಿಗೆ ಕೆಪಿಟಿಸಿಎಲ್‌ನಿಂದ ಹಣ ನೀಡಿಲ್ಲ. ಕೆಪಿಸಿಗೆ ಎಸ್ಕಾಂಗಳು ಹಣ ಪಾವತಿ ಮಾಡಿಲ್ಲ. ಇಂಧನ ಸಚಿವರು ಇದರ ಬಗ್ಗೆ ಮಾತೇ ಆಡುವುದಿಲ್ಲ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.