ರಾಜ್ಯ ಸರ್ಕಾರ ಹೊಸ ಗಾರ್ಮೆಂಟ್ ಫ್ಯಾಕ್ಟರಿ ತರಲಿ

state government should bring a new Garment factory
Published on

ಬಂಕಾಪುರ: ಖುರ್ಸಾಪುರದ ಜವಳಿ ಪಾರ್ಕ್​ನಲ್ಲಿ ಇನ್ನೂ ಏಳೆಂಟು ಹೊಸ ಗಾರ್ಮೆಂಟ್ ಫ್ಯಾಕ್ಟರಿ ಆರಂಭಿಸಲು ಅವಕಾಶ ಇದೆ. ರಾಜ್ಯ ಸರ್ಕಾರ ಪ್ರಯತ್ನ ಮಾಡಿದರೆ ಗಾರ್ಮೆಂಟ್ ಫ್ಯಾಕ್ಟರಿ ತಂದು ಸುಮಾರು 20ರಿಂದ 25 ಸಾವಿರ ಮಹಿಳೆಯರಿಗೆ ಕೆಲಸ ಒದಗಿಸಿ, ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗಾಂವಿ ತಾಲೂಕಿನ ಖುರ್ಸಾಪುರದ ಜವಳಿ ಪಾರ್ಕ್​ನಲ್ಲಿ ಬುಧವಾರ ಟೆಕ್ಸ್​ನಾ ವರ್ಲ್ಡ್ ಲಿ. ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.

2010ರಲ್ಲಿ ಗಾರ್ವೆಂಟ್ ಉದ್ಯಮ ತರಲು ಪ್ರಯತ್ನಿಸಿ ವಿಫಲನಾಗಿದ್ದೆ. ನಂತರ ಬಿಜೆಪಿ ಸರ್ಕಾರ ಇದ್ದಾಗ ಸುಮಾರು 50 ಕೋಟಿ ರೂ. ಅನುದಾನದಲ್ಲಿ ಜವಳಿ ಪಾರ್ಕ್ ನಿರ್ವಿುಸಲಾಯಿತು. ಅಂತಾರಾಷ್ಟ್ರೀಯ ಮಟ್ಟದ ಟೆಕ್ಸನಾ ಕಂಪನಿ ಇಲ್ಲಿಗೆ ತರಲು ನಾವು ಯಶಸ್ವಿಯಾಗಿದ್ದೇವೆ. ಇದು ರಾಷ್ಟ್ರದಲ್ಲಿಯೇ ಜವಳಿ ಉತ್ಪನ್ನಗಳನ್ನು ಅತಿ ಹೆಚ್ಚು ರಫ್ತು ಮಾಡುವ ಕಂಪನಿಯಾಗಿದೆ. ಇಲ್ಲಿ ತಯಾರಿಯಾಗುವಂತಹ ಬಟ್ಟೆಗಳು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ರಫ್ತಾಗುತ್ತವೆ. ಅಲ್ಲಿನ ಟಾಪ್ ಬ್ರ್ಯಾಂಡ್​ಗಳು ಇಲ್ಲಿ ತಯಾರಾಗುತ್ತವೆ. ಟೆಕ್ಸನಾ ಕಂಪನಿ ಅತ್ಯಂತ ಉತ್ಕ್ರಷ್ಟವಾದಂತಹ ಮಷಿನ್​ಗಳನ್ನು ಅಳವಡಿಸಿ ಕೆಲಸಗಾರರಿಗೆ ತರಬೇತಿ ನೀಡಿದೆ. ನಮ್ಮ ಮಹಿಳೆಯರು ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಜವಳಿ ಉತ್ಪನ್ನಗಳನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಟೆಕ್ಸನಾ ಕಂಪನಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು. ಜವಳಿ ಪಾರ್ಕ್ ಕೊನೆಯ ಹಂತದ ಕಾಮಗಾರಿಗೆ 6 ಕೋಟಿ ರೂ. ಅವಶ್ಯವಿದ್ದಾಗ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗೆ ಮಾತನಾಡಿದಾಗ ಅವರು ಕೂಡಲೇ ಹಣ ಬಿಡುಗಡೆ ಮಾಡಿದರು. ಅವರಿಗೂ ಧನ್ಯವಾದ ಸಲ್ಲಿಸುತ್ತೇನೆ. ಇಲ್ಲಿ ಇನ್ನಷ್ಟು ಕಾರ್ಖಾನೆಗಳು ಬಂದರೆ ನಮ್ಮ ಸಂತೋಷ ಇನ್ನಷ್ಟು ಇಮ್ಮಡಿಗೊಳ್ಳುತ್ತದೆ. ಈ ಹಿಂದುಳಿದ ಪ್ರದೇಶಕ್ಕೆ ಇದು ಒಳ್ಳೆಯ ಬೆಳವಣಿಗೆ ಎಂದರು.

ಬಿಜೆಪಿ ಮುಖಂಡ ಭರತ ಬೊಮ್ಮಾಯಿ, ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಹರವಿ, ಗಂಗಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ, ತಿಪ್ಪಣ್ಣ ಸಾತಣ್ಣವರ, ಉಮೇಶ ಅಂಗಡಿ, ದೇವಣ್ಣ ಚಾಕಲಬ್ಬಿ, ಶ್ರೀಕಾಂತ ಬುಳ್ಳಕ್ಕನವರ, ಪರಸುರಾಮ ಸೊನ್ನದ, ನವೀನ ರಾಮಗೇರಿ, ಶಂಭಣ್ಣ ಕಡಕೋಳ, ಕಾಶಿನಾಥ ಕಳ್ಳಿಮನಿ, ಹೊನ್ನಪ್ಪ ಹೂಗಾರ, ಮಂಜುನಾಥ ಬ್ಯಾಹಟ್ಟಿ, ಟೆಕ್ಸನಾ ಕಂಪನಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net