

ಬೆಂಗಳೂರು: ‘ಅನ್ನಭಾಗ್ಯ ಯೋಜನೆಯಡಿ’ ಅಕ್ಕಿ ಬದಲು ಫುಡ್ ಕಿಟ್ ವಿತರಿಸಲು ಸರ್ಕಾರ ತೆಗೆದುಕೊಂಡಿರುವ ತೀರ್ಮಾನಕ್ಕೆ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತಲಾ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದಕ್ಕೆ ಅಂಗಡಿ ಮಾಲೀಕರಿಗೆ ಕಮಿಷನ್ ನೀಡಲಾಗುತ್ತಿದೆ. ಆದರೆ, ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಕಮಿಷನ್ ಸಿಗುತ್ತಿದೆ. ಇದರಿಂದ ಜೀವನ ನಿರ್ವಹಿಸಲು ಈಗಾಗಲೇ ನಮಗೆ ಕಷ್ಟವಾಗುತ್ತಿದೆ. ಹೀಗಿರುವಾಗ, ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಕಡಿತಗೊಳಿಸಿ ‘ಆಹಾರ ಕಿಟ್’ ನೀಡಿದರೆ ಕಮಿಷನ್ ಸಿಗಲ್ಲ. ಒಂದು ವೇಳೆ ‘ಆಹಾರ ಕಿಟ್’ ವಿತರಿಸಲು ಮುಂದಾದರೆ ನಮಗೆ ನೀಡುತ್ತಿರುವ ಕಮಿಷನ್ ಸೌಲಭ್ಯ ಮುಂದುವರಿಸಬೇಕು ಎಂದು ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ (ಮೊದಲ ಅವಧಿ) ಸಿಎಂ ಆಗಿದ್ದಾಗ ಬಡವರಿಗೆ ಪಡಿತರ ವಿತರಿಸಲು ಆಹಾರ ಕಿಟ್ ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಈ ವೇಳೆ ಕಿಟ್‌ಗಳಿಗೆ ನ್ಯಾಯಬೆಲೆ ಅಂಗಡಿ ಮಾಲೀಕರೇ ಹಣ ಕೊಟ್ಟು ಖರೀದಿಸುತ್ತಿದ್ದರು. ಆಗಲೂ ಕಮಿಷನ್ ಹಣವನ್ನು ಮಾಲೀಕರಿಗೆ ನೀಡಲಾಗುತ್ತಿತ್ತು. ಈ ಮಾದರಿಯನ್ನು ಸರ್ಕಾರ ಅನುಸರಿಸಬೇಕು. ಈ ಮೂಲಕ 20 ಸಾವಿರ ಮಾಲೀಕರಿಗೆ ಆರ್ಥಿಕವಾಗಿ ಸಹಾಯವಾಗಲಿದೆ. ಈ ಬಗ್ಗೆ ಸಿಎಂ, ಆಹಾರ ಸಚಿವರು ಗಮನಹರಿಸಬೇಕು ಎಂದು ಕೃಷ್ಣಪ್ಪ ಮನವಿ ಮಾಡಿದ್ದಾರೆ.