ಐಟಿ ಕ್ಷೇತ್ರಕ್ಕೆ ಸರ್ಕಾರ ಉತ್ತೇಜನ: ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿಗೆ ಅನುಮೋದನೆ

IT
Published on

ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ರಾಜ್ಯದಲ್ಲಿ ಮತ್ತಷ್ಟು ಉಜ್ವಲಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರ 2020-2025 ರ ಅವಧಿಗೆ ಮಾಹಿತಿ ತಂತ್ರಜ್ಞಾನ ಕಾರ್ಯ ನೀತಿ ರೂಪಿಸಿದೆ. ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಈ ನೀತಿಗೆ ಒಪ್ಪಿಗೆ ನೀಡಿದೆ. ಐಟಿ, ಐಟಿಇಎಸ್ ವಲಯ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕ ತನ್ನ ನೇತೃತ್ವದ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಐಟಿ ಕಾರ್ಯನೀತಿ ಹೊಂದಿದೆ. 60 ಲಕ್ಷ ಉದ್ಯೋಗ ಸೃಜಿಸುವ ಸಂಕಲ್ಪವನ್ನಿಟ್ಟು ಕೊಂಡು ಈ ನೀತಿ ನಿರೂಪಿಸಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ 3ನೇ ವಲಯಗಳಲ್ಲಿ ಹೂಡಿಕೆ ಹೆಚ್ಚಿಸಲು ಭೂಮಿ ಖರೀದಿ, ವಿದ್ಯುತ್ ಪೂರೈಕೆ, ನೀರು ಮೊದಲಾದ ಸೌಲಭ್ಯ ಕಲ್ಪಿಸುವಾಗ ವಿಶೇಷ ರಿಯಾಯಿತಿ.
  • ಹತ್ತು ಕೋಟಿ ರೂ.ವರೆಗಿನ ಹೂಡಿಕೆಗೆ ಸರಕಾರದಿಂದ ಭದ್ರತೆ.
  • ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಐಟಿ ಉದ್ಯಮ ವಿಸ್ತರಣೆ. ಇದಕ್ಕಾಗಿ ಎ,ಬಿ,ಸಿ ಎಂದು ವಲಯ ವರ್ಗೀಕರಣ.
  • ಉತ್ತರ ಕರ್ನಾಟಕ ಭಾಗದಲ್ಲಿ ಐಟಿ ಕೈಗಾರಿಕೆಗೆ ಭೂಮಿ ಖರೀದಿ ಮಾಡುವುದಕ್ಕೆ ಶೇ.100 ಮುದ್ರಾಂಕ ಶುಲ್ಕ ವಿನಾಯಿತಿ.
  • ವರ್ಕ್ ಫ್ರಂ ಹೋಮ್ ಉದ್ಯೋಗಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತ್ಯೇಕ ಇಂಟರ್ನೆಟ್ ಸೌಲಭ್ಯ
  • 5ಜಿ ಇಂಟರ್ನೆಟ್ ಸೌಲಭ್ಯಕ್ಕೆ ವ್ಯವಸ್ಥೆ ್ಝ ದೇಶದ ಐಟಿ ಉತ್ಪಾದನಾ ಕ್ಷೇತ್ರದ ಪೈಕಿ ಶೇ.30 ಕೊಡುಗೆ ನೀಡುವ ಗುರಿ.
  • ಟ್ರಿಲಿಯನ್​ ಡಾಲರ್ ಡಿಜಿಟಲ್ ಆರ್ಥಿಕತೆ ಸೃಷ್ಟಿ
  • ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಹೊರತುಪಡಿಸಿ ಹೊರಗಡೆ ಸ್ಥಾಪಿಸಲು ಉದ್ದೇಶಿಸಿರುವ ಐಟಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ.
  • ಡೇಟಾ ರಕ್ಷಣೆ, ಸುಸ್ಥಿರ ಐಟಿ ವ್ಯವಸ್ಥೆಗಾಗಿ ಸೈಬರ್ ಸೆಕ್ಯುರಿಟಿ ನೀತಿ ಅನ್ವಯ ಭದ್ರತೆ ಒದಗಿಸಲಾಗುವುದು

ಹೊಸ ವಿದ್ಯುನ್ಮಾನ ನೀತಿ ಜಾರಿ

ರಾಜ್ಯ ಸರ್ಕಾರದ ವಿದ್ಯುನ್ಮಾನ ನೀತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ವ್ಯಾಪ್ತಿಯ ಹೊರತಾಗಿರುವ ಪ್ರದೇಶಗಳಲ್ಲಿ ಸ್ಥಾಪಿಸಲಾಗುವ ಕೈಗಾರಿಕೆಗಳಿಗೆ ಜಮೀನಿನ ಮೇಲೆ ಶೇ.25 ರಷ್ಟು ಬಂಡವಾಳ ಹೂಡಿಕೆಯ ಸಹಾಯಧನವನ್ನು (ಸಬ್ಸಿಡಿ) ಪಡೆಯಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ಅಥವಾ ಕರ್ನಾಟಕ ಸರ್ಕಾರಕ್ಕೆ ಸೇರಿದ ಇನ್ಯಾವುದೇ ಸಂಸ್ಥೆಯಿಂದ ಸಂಗ್ರಹಿಸಿದ್ದಲ್ಲಿ, 50 ಎಕರೆಗಳೊಳಗಿರುವ ಮತ್ತು ಅಷ್ಟು ವಿಸ್ತೀರ್ಣವನ್ನು ಮೀರಿಲ್ಲದ ಜಮೀನು ಪ್ರದೇಶದವರೆಗೆ ಮತ್ತು ವಾಸ್ತವವಾಗಿ ಸಂಗ್ರಹಿಸಿದ ವೆಚ್ಚದ ಆಧಾರದ ಮೇಲೆ ಜಮೀನಿನ ಮೇಲೆ ಶೇ.25 ರಷ್ಟು ಬಂಡವಾಳ ಹೂಡಿಕೆಯ ಸಹಾಯಧನವನ್ನು ಕಲ್ಪಿಸಲಾಗುತ್ತದೆ. ಇತರ ಮೂಲಗಳಿಂದ ಸಂಗ್ರಹಿಸಲಾಗುವ ಜಮೀನಿಗೆ ಸಬ್ಸಿಡಿಯು ಸಂಗ್ರಹಿಸಿದ ಸಮಯದಲ್ಲಿದ್ದ ಜಮೀನಿನ ಮಾರ್ಗಸೂಚಿ ದರದ ಅನ್ವಯ ಇರುತ್ತದೆ. ಇವುಗಳ ಜತೆಗೆ ಇನ್ನೂ ವಿಶೇಷ ಪ್ರೋತ್ಸಾಹಗಳನ್ನು ಈ ನೀತಿಯಲ್ಲಿ ಅಳವಡಿಸಲಾಗಿದೆ.

ಸದರಿ ಯೋಜನೆಯ ಮೂಲಕ ರಾಜ್ಯ ಸರ್ಕಾರಕ್ಕೆ 5,000 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸಲಾಗಿದ್ದು, ಮುಂದಿನ 5 ವರ್ಷಗಳ ಅವಧಿಯಲ್ಲಿ 43,000 ನೇರ ಉದ್ಯೋಗವನ್ನು ಸೃಜಿಸುವ ಸಾಮರ್ಥ್ಯ ಹೊಂದಿದೆ.

ಸಂಪುಟದ ನಿರ್ಣಯಗಳು

  • 21 ತಾಲೂಕು ಜಲಾನಯನ ಕ್ಷೇತ್ರಕ್ಕೆ 600 ಕೋಟಿ ರೂ. ವೆಚ್ಚದ ಯೋಜನೆ
  • ಸರ್ಕಾರಿ ಶಾಲೆಗಳಲ್ಲಿ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಹಸಿರು ನಿಶಾನೆ
  • ರಾಜ್ಯದ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೋಮಾ ಕಾಲೇಜುಗಳಲ್ಲಿ ಡಿಜಿಟಲ್ ಕಲಿಕೆ
  • ಅರಕೇರಾ ಗ್ರಾಪಂ ತಾಲೂಕು ಕೇಂದ್ರವಾಗಿ, ಸೊರಬ ಪುರಸಭೆಯಾಗಿ ಮೇಲ್ದರ್ಜೆಗೆ
  • ಜೋಗದ ಪ್ರವಾಸಿ ಸೌಲಭ್ಯ ಅಭಿವೃದ್ಧಿಗೆ 120 ಕೋಟಿ ರೂ. ಯೋಜನೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net