

ಕೆ.ಆರ್.ನಗರ: ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ತಾಲೂಕಿನ ಕಾಳೇನಹಳ್ಳಿ ಆದರ್ಶ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಅಸಾಧಾರಣ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ಅದಕ್ಕೆ ಪೋಷಣೆ ನೀಡುವಂತಾಗಬೇಕು. ಗ್ರಾಮ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೂ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಲು ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದ್ದು, ಸೋಲು-ಗೆಲುವನ್ನು ಲೆಕ್ಕಿಸದೆ ಭಾಗವಹಿಸಬೇಕು ಎಂದು ಕಿವಿಮಾತು ಹೇಳಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿನ ವಿವಿಧ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದು ಇದು ಇತರರಿಗೆ ಮಾದರಿಯಾಗಿದೆ. ಹಾಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ಎಲ್ಲ ಶಾಲೆಗಳ ದುರಸ್ತಿಗೆ ಮೂರು ಕೋಟಿ ರೂ. ಅನುದಾನ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ಇದರ ಜತೆಗೆ ಆದರ್ಶ ಶಾಲೆಯ ಒಳಾವರಣ ಸಮತಟ್ಟು ಕೆಲಸಕ್ಕೂ ಹಣ ನೀಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಅಗತ್ಯವಿರುವ ಶಾಲೆಗಳ ದುರಸ್ತಿಯ ತುರ್ತು ಕೆಲಸವನ್ನು ಆದ್ಯತೆ ಮೇರೆಗೆ ನಿರ್ವಹಿಸಿ ನನಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕು ನಾಲ್ಕನೇ ಸ್ಥಾನ ಗಳಿಸಿದ್ದು ಈ ಬಾರಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನಕ್ಕೇರಲು ಈಗಿನಿಂದಲೇ ಪೂರ್ವ ತಯಾರಿ ಕೈಗೊಳ್ಳಬೇಕು. ಪ್ರೌಢಶಾಲಾ ಶಿಕ್ಷಕರಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಬೇಕು. ಈ ವಿಚಾರದಲ್ಲಿ ನಾನು ಸಲಹೆ ಮತ್ತು ಸಹಕಾರ ನೀಡಲು ಬದ್ಧ ಎಂದು ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾತನಾಡಿ, ರಾಜ್ಯ ಸರ್ಕಾರ 2004 ರಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಎಂಬ ವಿಭಿನ್ನ ಕಾರ್ಯಕ್ರಮ ಆರಂಭಿಸಿತು. ಪಠ್ಯಕ್ಕೆ ಪೂರಕವಾದ ಕಲಿಕೆಯನ್ನು ಕಲಿಯುವುದರ ಜತೆಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾತ್ಮಕ ಸಾಮರ್ಥ್ಯವನ್ನು ಸಾಬೀತುಪಡಿಸಲು ಸೂಕ್ತ ಅವಕಾಶ ದೊರೆಯಲಿದ್ದು, ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಪಿ.ಜಗದೀಶ್, ಮುಖ್ಯ ಶಿಕ್ಷಕಿ ರುಕ್ಮಿಣಿ ಮಾತನಾಡಿದರು. ವಿದ್ಯಾರ್ಥಿಗಳ ವೇಷಭೂಷಣ ಮತ್ತು ಇತರ ಕ್ರಿಯಾತ್ಮಕ ಚಟುವಟಿಕೆಗಳು ಗಮನ ಸೆಳೆಯಿತು. ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶೈಲಜಾ, ಸದಸ್ಯರಾದ ದೊಡ್ಡಕೊಪ್ಪಲು ರವಿ, ಗೊರಗುಂಡಿ ಚಂದ್ರು, ಕವಿತಾ ಧನಂಜಯ, ಶಿಲಾ ್ಪಧರ್ಮ, ಕಲಾವತಿ, ಮಂಜುನಾಥ್, ಸಣ್ಣಪ್ಪ, ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕ ದಾಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಿಡಿಪಿಒ ಸಿ.ಎಂ.ಅಣ್ಣಯ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ ಇತರರು ಹಾಜರಿದ್ದರು.