ರಾಜ್ಯ ಸರ್ಕಾರದಿಂದ ಶೀಘ್ರ ನ್ಯಾಯದಾನಕ್ಕೆ ವ್ಯವಸ್ಥೆ

h7-award
Published on

ಹುಬ್ಬಳ್ಳಿ: ದುಬಾರಿ ವಕೀಲರು ಇದ್ದರೆ ತೀರ್ಪು ಬೇಗ ಬರುತ್ತದೆ ಎನ್ನುವುದು ಸರಿಯಲ್ಲ. ಯಾವುದೇ ಪ್ರಕರಣ ಇರಲಿ ಶ್ರೀಸಾಮಾನ್ಯನಿಗೂ ಶೀಘ್ರ ನ್ಯಾಯ ಸಿಗಬೇಕು. ಅಂಥದ್ದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಕೆಎಲ್‌ಇ ಲಾ ಅಕಾಡೆಮಿಯ ಜಿ.ಕೆ. ಕಾನೂನು ಕಾಲೇಜ್ ವತಿಯಿಂದ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

ವಕೀಲಿಕೆಯಲ್ಲಿ ಪಂಡಿತನಿದ್ದೇನೆ ಎನ್ನುವುದು ತಪ್ಪು. ಭಾಷೆ ಮೇಲೆ ಹಿಡಿತ, ಮಂಡಿಸುವ ವಾದ ಇವೆಲ್ಲವೂ ಪರಿಗಣನೆಗೆ ಬರುತ್ತವೆ. ಕಾನೂನು ಜತೆಗೆ ಕೌಶಲವನ್ನೂ ರೂಢಿಸಿಕೊಳ್ಳಬೇಕು ಎಂದರು.

ಸಂವಿಧಾನದ ಸೈನಿಕರು ವಕೀಲರು. ಸ್ವಾತಂತ್ರೃ ಪೂರ್ವದಲ್ಲಿ ಹೋರಾಟ ನಡೆಸಿದವರೇ ವಕೀಲರು. ದೇಶ ಹಾಗೂ ಸಂವಿಧಾನ ರಕ್ಷಣೆಯಲ್ಲಿ ಅವರ ಪಾತ್ರ ಹೆಚ್ಚಿದೆ. ಸಂವಿಧಾನದ ಆಶಯಗಳನ್ನು ಉಳಿಸುವುದು ನಿಮ್ಮೆಲ್ಲರ ಜವಾಬ್ದಾರಿ ಎಂದು ಕಿರಿಯ ವಕೀಲರಿಗೆ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ್ ಮಾತನಾಡಿ, ಶ್ರೀಸಾಮಾನ್ಯನಿಗೂ ನ್ಯಾಯದಾನದ ವ್ಯವಸ್ಥೆ ಪರಿಪೂರ್ಣವಾಗಿ ಆಗಿಲ್ಲ. ಪ್ರಕಟವಾದ ನ್ಯಾಯಾಲಯದ ಆದೇಶವನ್ನೂ ಕಾನೂನುಬದ್ಧವಾಗಿ ವಿಮರ್ಶೆಗಳಾಗಬೇಕು. ಸರ್ಕಾರಗಳು ಕೂಡ ಕೋರ್ಟ್‌ಗಳಿಗೆ ಸವಲತ್ತು ಮತ್ತು ನ್ಯಾಯಾಧೀಶರ ನೇಮಕ ಮಾಡಬೇಕು. ಇದರಿಂದ ತ್ವರಿತವಾಗಿ ನ್ಯಾಯದಾನ ನೀಡಲು ಸಾಧ್ಯವಾಗಬಹುದು ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಮಾತನಾಡಿ, ಭಾಷಾ ಪ್ರಯೋಗ, ವಾಕ್ಯ ರಚನೆ, ದೇಹದ ಆಂಗಿಕ ಭಾಷೆಯಿಂದ ವಾದ ಮಾಡಿಸಿದರೆ ಗೆಲುವು ದಕ್ಕಲಿದೆ. ಯಾವುದೇ ವಾದವನ್ನು ಖಂಡಿಸುವುದರಿಂದ ಗೆಲ್ಲುವುದಿಲ್ಲ ಎಂದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ.ಅಡಿಗ, ವಿಜಯಕುಮಾರ ಪಾಟೀಲ, ಕೆಎಲ್‌ಇ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ ಇತರರು ಇದ್ದರು.

ಇದೇ ವೇಳೆ ಸ್ಪರ್ಧೆಯಲ್ಲಿ ಕೆಎಲ್‌ಇ ಬಿ.ವಿ. ಬೆಲ್ಲದ ಕಾನೂನು ಕಾಲೇಜ್ ಪ್ರಥಮ ಸ್ಥಾನ ಪಡೆಯಿತು. ರನ್ನರ್ ಅಪ್ ಆಗಿ ತಮಿಳುನಾಡಿನ ಸವಿತಾ ಸ್ಕೂಲ್ ಆಫ್ ಲಾ ಕಾಲೇಜ್ ಹೊರಹೊಮ್ಮಿತು. ಬೆಸ್ಟ್ ಮೆಮೋರಿಯಲ್ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಸ್ಟ್ ಮೇಲ್ ಅವಾರ್ಡ್ ಸಾಯಿರಾಜ್, ಬೆಸ್ಟ್ ಫಿಮೇಲ್ ಅವಾರ್ಡ್ ಕೀರ್ತನಾ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net