ಜನಸಾಮಾನ್ಯರ ಜೀವನದೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟ

blm (4)
Published on

ಕಾರ್ಕಳ: ರಾಜ್ಯದ 23 ಲಕ್ಷ ವೃದ್ಧಾಪ್ಯ ಪಿಂಚಣಿ ಮತ್ತು ಸಂಧ್ಯಾ ಸುರಕ್ಷಾ ಸೌಲಭ್ಯಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ತೀರ ಕಷ್ಟದಲ್ಲಿರುವ ಅಸಹಾಯಕ ವೃದ್ಧರು ದಿಕ್ಕೇ ತೋಚದಂತಾಗಿದ್ದಾರೆ. ಈಗಾಗಲೇ ಹಲವಾರು ಹಗರಣಗಳಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರ್ಕಾರ ತನ್ನ ದುರಾಡಳಿತದಿಂದಾಗಿ ಗ್ರಾಮೀಣ ಭಾಗದ ಜನರ ದೈನಂದಿನ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಗಳನ್ನು ಖಂಡಿಸಿ ಸಾಣೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಸಾಣೂರು ಗ್ರಾಪಂ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಣೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಮನವಿಯನ್ನು ರಾಜ್ಯ ಸರ್ಕಾರಕ್ಕೆ ತಲುಪಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಧು ಎಂ.ಸಿ.ಯವರಿಗೆ ಹಸ್ತಾಂತರಿಸಿದರು. ನೂರಾರು ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಬಿಜೆಪಿ ಪ್ರಮುಖರಾದ ಸುರೇಶ್ ಮಡಿವಾಳ್, ಪ್ರವೀಣ್ ಕೋಟ್ಯಾನ್, ವಿಶ್ವನಾಥ್ ಶೆಟ್ಟಿ, ಉದಯ ಅಂಚನ್, ಭಾಸ್ಕರ ಭಟ್, ರವೀಂದ್ರ ಪೂಜಾರಿ, ರತ್ನಾಕರ್ ಕಾಮತ್, ರಾಕೇಶ್ ಅಮೀನ್, ಪ್ರಸಾದ್ ಶೆಟ್ಟಿ, ಮಾಧವ ಭಂಡಾರ್ಕರ್, ಪ್ರಭಾಕರ ಸನಿಲ್, ಶ್ಯಾಮಲಾ, ರಾಜೇಶ್ ಪೂಜಾರಿ, ಸಂತೋಷ್ ಸುವರ್ಣ, ಕಿರಣ್ ಕುಲಾಲ್, ನಾಗೇಂದ್ರ ಶೆಟ್ಟಿಗಾರ್, ಸೀತಾರಾಮ್ ಶೆಟ್ಟಿಗಾರ್, ರಾಜೇಶ್ ಕೋಟ್ಯಾನ್, ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷೆ ಯಶೋದಾ ಆರ್.ಸುವರ್ಣ, ಸುಜಾತಾ ಶೆಟ್ಟಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಸಾದ್ ಪೂಜಾರಿ, ಪಂಚಾಯಿತಿ ಸದಸ್ಯರಾದ ವಸಂತ, ಸತೀಶ್ ಪೂಜಾರಿ, ಸುಮತಿ, ಸರಸ್ವತಿ, ಪ್ರಮೀಳಾ, ಸುನಂದ ನಾಯ್ಕ, ಗಿರಿಜಾ ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣಕ್ಕೆ ಮರಳು ಮತ್ತು ಕೆಂಪು ಕಲ್ಲುಗಳು ಸರಿಯಾಗಿ ಸಿಗದೆ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಿಲ್ಲ. ಇದರಿಂದ ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಕಷ್ಟ ಪಡುತ್ತಿದ್ದಾರೆ. ರಾಜ್ಯದಲ್ಲಿ ಒಂದು ಆಶ್ರಯ ಮನೆಗಳು ಕೂಡ ಫಲಾನುಭವಿಗಳಿಗೆ ಸಿಕ್ಕಿಲ್ಲ, ಒಂದು ಕಡೆ ಗ್ಯಾರಂಟಿ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡಿ ಇನ್ನೊಂದು ಕಡೆ ವಿದ್ಯುತ್ ದರ ಏರಿಸಿ ಜನರಿಂದ ಕಿತ್ತುಕೊಳ್ಳುತ್ತಿದೆ. - ಸುನೀಲ್‌ಕುಮಾರ್, ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net