

ಮುದ್ದೇಬಿಹಾಳ: ಸುಪ್ರೀಂಕೋರ್ಟ್ ತೀರ್ಪಿಗೆ ಸ್ಪಂದಿಸಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಂತೆ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಒಳ ಮೀಸಲಾತಿ ಹೋರಾಟ ಐಕ್ಯತಾ ಸಮಿತಿ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಭಾರಿ ಜನಬೆಂಬಲ ವ್ಯಕ್ತವಾಯಿತು.
ಮುದ್ದೇಬಿಹಾಳ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಪರಿಶಿಷ್ಟರು ಕೊರಳಿಗೆ ನೀಲಿ ಶಾಲು ಹಾಕಿಕೊಂಡು, ಕೈಯಲ್ಲಿ ನೀಲಿ ಬಾವುಟ ಹಿಡಿದು, ಹಣೆಗೆ ನೀಲಿ ತಿಲಕ ಇಟ್ಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಕಳೆದ ಅ.21ರಂದು ತಂಗಡಗಿಯಿಂದ ಪ್ರಾರಂಭಗೊಂಡಿದ್ದ ಒಳಮೀಸಲಾತಿ ಜನಜಾಗೃತಿ ರ‌್ಯಾಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಸಂಚರಿಸಿ ಬುಧವಾರ ಬೆಳಗ್ಗೆ ಪಟ್ಟಣದ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿತು. ಅಲ್ಲಿಂದ ಪ್ರಮುಖ ವೃತ್ತ, ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ರ‌್ಯಾಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ವೃತ್ತದ ಸುತ್ತಲೂ ಮಾನವ ಸರಪಳಿ ನಿರ್ಮಿಸಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು. ಅಲ್ಲಿಂದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ರ‌್ಯಾಲಿ ಮತ್ತೆ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.
ಬಸವಣ್ಣನ ವಚನ ಹೇಳುವ ಮೂಲಕ ಬಹಿರಂಗ ಸಭೆಗೆ ಚಾಲನೆ ನೀಡಲಾಯಿತು. ಮುಖಂಡರಾದ ಡಿ.ಬಿ.ಮುದೂರ, ಚನ್ನಪ್ಪ ವಿಜಯಕರ್, ಹರೀಶ ನಾಟೀಕಾರ, ಬಸವರಾಜ ಪೂಜಾರಿ, ತಂಗಡಗಿಯ ಶಾಂತಪ್ಪ ಪೂಜಾರಿ, ಕಾಶಿನಾಥ ದೊಡಮನಿ, ಜಾಥಾ ನೇತರತ್ವ ವಹಿಸಿದ್ದ ತಿಪ್ಪಣ್ಣ ದೊಡಮನಿ ಇನ್ನಿತರರು ಒಳಮೀಸಲಾತಿ ಅನುಷ್ಠಾನದ ಅವಶ್ಯಕತೆ ಕುರಿತು ಮಾತನಾಡಿದರು. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ವಿಸ್ತರಿಸುವ ಮತ್ತು ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಅಲಂಕೃತ ವಾಹನದ ಮೇಲೆ ಕಂಬಳಿ ಹೊದಿಸಿ ಅದರ ಮೇಲೆ ಬಸವೇಶ್ವರರ ಭಾವಚಿತ್ರ, ಈಶ್ವರಲಿಂಗ, ವಿಭೂತಿ, ರುದ್ರಾಕ್ಷಿ ಮುಂತಾದವುಗಳನ್ನು ಇಟ್ಟಿದ್ದು ಸಾರ್ವಜನಿಕರ ಗಮನ ಸೆಳೆಯಿತು.
ಚಿತ್ರದುರ್ಗದ ಕೋಡಿಹಳ್ಳಿಯ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ, ಮುಖಂಡರಾದ ಭಗವಂತ ಕಬಾಡೆ, ಪರಶುರಾಮ ಮುರಾಳ, ಬಸವರಾಜ ಕೋಳೂರ, ನೀಲಪ್ಪ ನಾಲತವಾಡ, ಭೀಮಣ್ಣ ಲೋಟಗೇರಿ, ಹಣಮಂತ ಮಾದರ, ಮುದ್ದೇಬಿಹಾಳ ಪುರಸಭೆ ಸದಸ್ಯ ಶಿವು ಶಿವಪುರ, ಪ್ರಶಾಂತ ಕಾಳೆ, ಪ್ರಕಾಶ ಸರೂರ, ದೇವರಾಜ ಹಂಗರಗಿ, ಬಾಲಚಂದ್ರ ಹುಲ್ಲೂರ, ಪರಶುರಾಮ ಕೂಚಬಾಳ, ಎಸ್.ಎಚ್.ಲೊಟಗೇರಿ, ರವಿ ಬಸರಕೋಡ, ಹುಲಗಪ್ಪ ನಾಗರಬೆಟ್ಟ, ರವಿ ಗರಸಂಗಿ, ಹಣಮೇಶ ಜೈನಾಪುರ, ದೇವೇಂದ್ರ ಡೊಂಕಮಡು, ಮಲ್ಲಪ್ಪ ಬಸರಕೋಡ, ಬೈಲಪ್ಪ ಗರಸಂಗಿ, ಭೀಮಣ್ಣ ಹುಲ್ಲೂರ, ಶೇಖರ ಆಲೂರ, ಮುತ್ತು ಪೂಜಾರಿ, ಆನಂದ ಮುದೂರ, ದುರಗಪ್ಪ ದೊಡಮನಿ, ಯಮನಪ್ಪ ಮಾದರ, ಮಾರುತಿ ಸಿದ್ದಾಪುರ, ಶಾಂತಕುಮಾರ ಹಾದಿಮನಿ, ತಿಪ್ಪಣ್ಣ ಮಾದರ ಇತರರು ಇದ್ದರು.