

ಶಿವಮೊಗ್ಗ: ವಾಲ್ಮಿಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಶರಣಾಗಿದ್ದ ನಿಗಮ ಅಧೀಕ್ಷಕ ಚಂದ್ರಶೇಖರನ್ ಕುಟುಂಬದ ಓರ್ವರಿಗೆ ಸರ್ಕಾರ ಕೆಲಸ ಕೊಡುವುದು ಮತ್ತು ಪಿಂಚಣಿ ನೀಡುವುದು ಬಾಕಿ ಇತ್ತು. ಅದಕ್ಕಾಗಿ ರಾಷ್ಟ್ರಭಕ್ತರ ಬಳಗದಿಂದ ಅನೇಕ ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ ಗಡುವು ನೀಡಿದ ಪರಿಣಾಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ವಿನೋಬನಗರದಲ್ಲಿರುವ ಚಂದ್ರಶೇಖರನ್ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಚಂದ್ರಶೇಖರನ್ ಪತ್ನಿ ಕವಿತಾ ಅವರನ್ನು ಮಾತನಾಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲೇ ಈ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಇನ್ನು ಒಂದೆರಡು ದಿನದಲ್ಲಿ ಬೆಂಗಳೂರಿನಲ್ಲಿ ಪರಿಹಾರದ ಚೆಕ್ ನೀಡಲಾಗುತ್ತಿದೆ ಎಂದರು.
ಈ ಕುಟುಂಬಕ್ಕೆ 8.25ಲಕ್ಷ ರೂ. ಅಟ್ರಾಸಿಟಿ ಪ್ರಕರಣದ ಬಾಬ್ತು ಜಿಲ್ಲಾಧಿಕಾರಿ ಮೂಲಕ ಶೀಘ್ರದಲ್ಲೇ ನೀಡಲಾಗುತ್ತಿದೆ. ಸ್ವತಃ ಜಿಲ್ಲಾಧಿಕಾರಿ ನನಗೆ ಈ ವಿಷಯ ತಿಳಿಸಿದ್ದಾರೆ. ಈ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಡಿಸಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು. ಚಂದ್ರಶೇಖರನ್ ಕುಟುಂಬದ ಸದಸ್ಯರು ಹಾಗೂ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಮುಂತಾದವರಿದ್ದರು.