

ಮೈಸೂರು: ಕಾಂಗ್ರೆಸ್ ಘೋಷಿಸಿದ 5 ಗ್ಯಾರೆಂಟಿಗಳನ್ನು ರಾಜ್ಯ ಸರ್ಕಾರ ಏಕಾಏಕಿ ಸುಮ್ಮಸುಮ್ಮನೆ ಜಾರಿಗೊಳಿಸಲು ಸಾಧ್ಯವಿಲ್ಲ. ಗ್ಯಾರೆಂಟಿಗಳಿಗೆ ಷರತ್ತುಗಳು ಹಾಕುವುದು ಅನಿವಾರ್ಯ. ಬಂದವರಿಗೆಲ್ಲ ಗ್ಯಾರೆಂಟಿಯ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೆರಿಗೆದಾರರ ಹಣವನ್ನು ಗ್ಯಾರೆಂಟಿ ಜಾರಿಗೆ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಷರತ್ತುಗಳನ್ನು ಹಾಕಬೇಕಾಗುತ್ತದೆ. ಗ್ಯಾರೆಂಟಿ ಯೋಜನೆಗಳು ದುಡಿಯುವ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಗೋ ಹತ್ಯೆ ನಿಷೇಧ ಕಾಯ್ದೆಯ ವಿಚಾರದಲ್ಲಿ ಸರ್ಕಾರದ ಅಭಿಪ್ರಾಯವೇ ನನ್ನ ಅಭಿಪ್ರಾಯ, ಈ ವಿಚಾರದಲ್ಲಿ ನನಗೆ ಪ್ರತ್ಯೇಕ ಅಭಿಪ್ರಾಯ ಇಲ್ಲ. ಕಾಯ್ದೆಯ ವಿಚಾರ ಕುರಿತ ಹೇಳಿಕೆಗಳನ್ನು ಬಿಜೆಪಿ ತಿರುಚುವ ಪ್ರಯತ್ನ ಮಾಡುತ್ತಿದೆ. ಸರ್ಕಾರ ಕಾಯ್ದೆಯ ಕುರಿತು ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಾಯ್ದೆ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಜನರ ಮನಸ್ಸಿಗೆ ನೋವಾಗದ ರೀತಿಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.
ಮಳೆಗಾಲದ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧತೆ ಕೈಗೊಳ್ಳಬೇಕು. ಕೃಷಿ ಇಲಾಖೆ ರೈತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಎದುರಾಗುವ ಕಾಯಿಲೆಗಳನ್ನು ಎದುರಿಸಲು ಹಾಗೂ ದುರಂತ ಎದುರಿಸಲು ಔಷಧಗಳನ್ನು ದಾಸ್ತಾನು ಇಡಬೇಕು ಎಂದು ಹೇಳಿದರು.