SIT | ಆಳಂದ ವಿಧಾನಸಭಾ ಕ್ಷೇತ್ರದ ಮತದಾರ ಹೆಸರು ಅಳಿಸಿದ ಪ್ರಕರಣ; ಎಸ್​​ಐಟಿ ರಚಿಸಿದ ರಾಜ್ಯ ಸರ್ಕಾರ

Siddaramaih
Published on

SIT: ಇತ್ತೀಚೆಗೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್​​ ಗಾಂಧಿ, ರಾಜ್ಯದ ಕಲಬುರ್ಗಿ ಜಿಲ್ಲೆಯ ಆಳಂದ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದರು, ಈಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ವಿಶೇಷ ತನಿಖಾ ತಂಡ (ಎಸ್​​ಐಟಿ) ರಚಿಸಿ ಆದೇಶ ಹೊರಡಿಸಿದೆ.

ಆದೇಶದ ಪತ್ರವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರನ್ನು ಪಟ್ಟಿಯಿಂದ ಅನಧಿಕೃತವಾಗಿ ಕೈಬಿಡಲಾಗಿರುವ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ಸಿಐಡಿಯ ವಿಶೇಷ ತನಿಖಾ ತಂಡವನ್ನು ರಚಿಸಿ, ಆದೇಶಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕರಾದ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದು, ಐಪಿಎಸ್​​ ಅಧಿಕಾರಿಗಳಾದ ಸೈದುಲು ಅದಾವತ್​, ಶುಭನ್ವಿತಾ ತಂಡದಲ್ಲಿರುವ ಇತರ ಸದಸ್ಯರು. ಈ ತಂಡಕ್ಕೆ ರಾಜ್ಯದ ವ್ಯಾಪ್ತಿಗೆ ಸಂಬಂಧಿಸಿದಂತೆ ಠಾಣಾಧಿಕಾರವನ್ನು ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದ ಉಳಿದ ಜಿಲ್ಲೆಯಲ್ಲಿ ದಾಖಲಾಗಿರುವ ಮುಂದೆ ದಾಖಲಾಗುವ ಎಲ್ಲ ಪ್ರಕರಣಗಳನ್ನು ಇದೇ ತಂಡ ವಿಚಾರಣೆ ನಡೆಸಲಿದೆ.

ರಾಹುಲ್ ಗಾಂಧಿ ಹೇಳಿದ್ದೇನು ?

ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್‌ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಆಳಂದ ಕ್ಷೇತ್ರದಲ್ಲಿನ 6,018 ಮತಗಳನ್ನು ರಾಜ್ಯದ ಹೊರಗಿನಿಂದ ಸಾಫ್ಟ್‌ವೇರ್ ಮತ್ತು ಫೋನ್ ಸಂಖ್ಯೆಗಳನ್ನು ಬಳಸಿ ಅಳಿಸಲು ಪ್ರಯತ್ನಿಸಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು. ಇದಷ್ಟೆ ಅಲ್ಲದೇ ಹೆಸರುಗಳನ್ನು ಅಳಿಸಲು ಬಳಸಲಾಗಿದೆ ಎನ್ನಲಾದ ಮೊಬೈಲ್ ನಂಬರ್ ಗಳನ್ನು ಸಹ ಬಹಿರಂಗಪಡಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net