ಮತಾಂತರಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ

17BGV2_HINDU JAGRUTHI VEDIKE PROTEST
Published on

ಬೆಳಗಾವಿ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಮುನ್ನ ಎಲ್ಲ ಸಮುದಾಯ ಉಪಜಾತಿಗಳ ಹಿಂದೆ ಕೆಸ್ತ ಪದವನ್ನು ಸೇರಿಸಿ ಹೊಸ ಉಪಜಾತಿ ಸೃಷ್ಟಿಸಿರುವುದನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಸಮೀಕ್ಷೆ ಬಹಿಷ್ಕರಿಸಿ ಹೋರಾಟದ ದಾರಿ ತುಳಿಯಬೇಕಾಗುತ್ತದೆ ಎಂದು ಲಿಂಗಾಯತ, ಬ್ರಾಹ್ಮಣ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗ, ರೆಡ್ಡಿ, ಅಂಬಿಗ, ಹೂಗಾರ ಸೇರಿ 46 ಸಮುದಾಯದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಗಾಂಧಿಭವನದಲ್ಲಿ ಬುಧವಾರ ಹಿಂದು ಜನಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ 46 ಜಾತಿ ಸಮುದಾಯಗಳ ಮುಖಂಡರ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಷಯದಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್​ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ವಕೀಲ ಎಂ.ಬಿ.ಝಿರಲೆ, ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗ ಎಲ್ಲ ಸಮುದಾಯ ಉಪಜಾತಿಗಳಲ್ಲಿ ಕೆಸ್ತ ಎಂಬ ಹೊಸ ಉಪಜಾತಿ ಸೇರ್ಪಡೆ ಮಾಡಿರುವುದು ಸರಿಯಾದ ಕ್ರಮವಲ್ಲ. ಹಿಂದು ಧರ್ಮದ ಅಸ್ತಿತ್ವವನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ. ಹಿಂದು ಧರ್ಮವನ್ನು ವಿಭಜಿಸುವ, ಮತಾಂತರವನ್ನು ಪ್ರೋತ್ಸಾಹಿಸಲು ಸರ್ಕಾರ ಷಡ್ಯಂತ್ರ ರೂಪಿಸಿದೆ ಎಂದರು.

ಸನಾತನ ಹಿಂದು ಧರ್ಮ ವಿವಿಧ ಸಮುದಾಯ, ಧಾರ್ಮಿಕ ಆಚರಣೆಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ. ನಮ್ಮಲ್ಲಿ ಜಾತಿಗಳು ಬೇರೆ ಬೇರೆ ಆಗಿರಬಹುದು ಆದರೆ, ಧಾರ್ಮಿಕ ಆಚರಣೆಗಳ ಮೂಲ ಹಿಂದು ಧರ್ಮವೇ ಆಗಿದೆ. ಹಿಂದುಳಿದ ವರ್ಗಗಳ ಆಯೋಗ ಏಕಾಏಕಿ ಎಲ್ಲ ಸಮುದಾಯಗಳ ಉಪಜಾತಿಗಳ ಹಿಂದೆ ಕೆಸ್ತ ಎಂಬ ಪದ ಸೇರಿಸಿ ಹೊಸ ಉಪಜಾತಿ ಸೃಷ್ಟಿಸಿ ವಿವಾದ ಸೃಷ್ಟಿಸಿದೆ. ಈ ವಿಷಯದಲ್ಲಿ ಪಕ್ಷಾತಿತ, ಜಾತ್ಯತಿತ ಹೋರಾಟ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ. ಆಯೋಗ ತನ್ನ ನಿರ್ಧಾರ ಬದಲಿಸದಿದ್ದರೆ ಕಾನೂನು ಹೋರಾಟದ ಜತೆ ಸಮೀಕ್ಷೆಗೆ ಬಹಿಷ್ಕಾರ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಕಾಂಗ್ರೆಸ್​ ಸರ್ಕಾರ ಮತಾಂತರದ ದೊಡ್ಡ ಷಡ್ಯಂತ್ರವಿದೆ. ಇದಕ್ಕಾಗಿ ವಿದೇಶದಿಂದ ದೇಣಿಗೆ ರೂಪದಲ್ಲಿ ಹಣ ಬಂದಿರಬಹುದು. ಹೀಗಾಗಿ, ಎಲ್ಲ ಸಮುದಾಯ ಉಪಜಾತಿಗಳ ಜನ ಎಚ್ಚೆತು ಹೋರಾಟ ನಡೆಸಬೇಕು. ಸರ್ಕಾರ ಲವ್​ ಜಿಹಾದ್​ ಹಾಗೂ ಮತಾಂತರವನ್ನು ಪ್ರೋತ್ಸಾಹಿಸುತ್ತಿದೆ ಎಂದು ದೂರಿದರು. ಮೇಯರ್​ ಮಂಗೇಶ ಪವಾರ್​, ಉಪಮೇಯರ್​ ವಾಣಿ ಜೋಶಿ, ವಿನೋದ ದೊಡ್ಡಣ್ಣವರ, ಈರಣ್ಣ ದಯಾನಂದ, ಸಂದೀಪ ಜೀರಗ್ಯಾಳ, ರೋಹನ್​ ಜವಳಿ, ಹನುಮಂತ ಕೊಂಗಾಲಿ, ಆರ್​.ಎಸ್​.ಮುತಾಲಿಕ್​, ಮುರಘೇಂದ್ರಗೌಡ ಪಾಟೀಲ, ವಿವಿಧ ಮಠಾಧೀಶಧರು ಇತರರಿದ್ದರು.

ಹಿಂದುಳಿದ ವರ್ಗಗಳ ಆಯೋಗ ಕೂಡಲೇ ಉಪಜಾತಿಗಳ ಹಿಂದೆ ಕೆಸ್ತ ಎಂಬ ಪದ ಸೇರಿಸಿ ಹೊಸ ಉಪಜಾತಿ ಸೃಷ್ಟಿಸಿರುವುದನ್ನು ಕೈಬಿಡಬೇಕು. ಈಗಾಗಲೇ ರಾಜ್ಯದಾದ್ಯಂತ ಈ ಕುರಿತು ವಿರೋಧ ವ್ಯಕ್ತವಾಗಿದೆ. ಈ ಕುರಿತು ಕಾನೂನು ಹೋರಾಟ ನಡೆಸುವ ಕುರಿತು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮಹಾಂತೇಶ ಕವಟಗಿಮಠ ವಿಧಾನ ಪರಿಷತ್​ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net