ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

3adarshkdga6
Published on

ಮಡಿಕೇರಿ: ಸರ್ಕಾರಿ ನೌಕರರ ಚಲನಶೀಲತೆಗೆ ಕ್ರೀಡಾಚಟುವಟಿಕೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮಕ್ಕೆ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿದರು.


ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಕ್ರಿಯಾಶೀಲ ಚಟುವಟಿಕೆಗೆ ಸಹಕಾರಿಯಾಗಲಿದೆ. ಇದರಿಂದ ಉತ್ಸಾಹ ಹೆಚ್ಚಲಿದೆ ಎಂದರು.


ಪೌರಾಯುಕ್ತ ವಿಜಯ ಮಾತನಾಡಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ಪೂರ್ತಿ ಮತ್ತು ಲವಲವಿಕೆ ದೊರೆಯುತ್ತದೆ ಎಂದರು.


ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ ಮಾತನಾಡಿ, ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್‌ನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ ಅವರು, ಎನ್‌ಪಿಎಸ್‌ನಿಂದ ಅನೇಕ ಗೊಂದಲವಿದೆ. ನಿವೃತ್ತಿ ನಂತರ ನೌಕರರ ಜೀವನ ಕಷ್ಟಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸರ್ಕಾರಿ ನೌಕರರಿಗೆ ಸಹಕರಿಸಬೇಕು ಎಂದರು.


ಮಡಿಕೇರಿ ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ೪೦ ಸೆಂಟ್ ಜಾಗ ನೀಡಲಾಗಿದೆ. ಭವನ ನಿರ್ಮಾಣ ಸಂಬಂಧ ಹೆಚ್ಚಿನ ಅನುದಾನ ನೀಡಬೇಕು ಎಂದು ಮಡಿಕೇರಿ ಶಾಸಕರಲ್ಲಿ ಕೋರಿದರು.


ಈ ಸಂದರ್ಭದಲ್ಲಿ ೨೦೨೨ನೇ ಸಾಲಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ವಿಜೇತರಾದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುರಾಜ್(ವಿರಾಜಪೇಟೆ), ಪ್ರದೀಪ್(ಸೋಮವಾರಪೇಟೆ), ಗೌರವ ಅಧ್ಯಕ್ಷ ಶಿವಕುಮಾರ್, ಮಂಜುನಾಥ್, ಕುಮಾರ, ಶಮ್ಮಿ, ಅನಿತಾ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net