

ಮೈಸೂರು: ಕ್ರೀಡೆ ಮನುಷ್ಯನ ಆರೋಗ್ಯವನ್ನು ವೃದ್ಧಿಗೊಳಿಸುವುದರ ಜತೆಗೆ ಮನಸ್ಸನ್ನು ಉಲ್ಲಾಸಿತಗೊಳಿಸಲು ಸಹಕಾರಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ಮೈಸೂರು ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುದ್ದೆಗಳು ಖಾಲಿ ಇರುವುದರಿಂದ ತಮ್ಮ ಹುದ್ದೆಯ ಜತೆಗೆ ಪ್ರಭಾರ ಹುದ್ದೆಗಳಲ್ಲಿಯೂ ರಾಜ್ಯ ಸರ್ಕಾರಿ ನೌಕರರು ಕಾರ್ಯನಿರ್ವಹಿಸುತ್ತಿರುವುದರಿಂದ ಒತ್ತಡದಲ್ಲಿದ್ದಾರೆ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಪರಿಷತ್‌ನಲ್ಲಿ ನಾನು ಸರ್ಕಾರವನ್ನು ಒತ್ತಾಯಿಸಿದ್ದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ನೌಕರರು ಒಂದೇ ಕಡೆ ಸೇರುವ ಅವಕಾಶವಾಗಿದೆ. ಮನುಷ್ಯ ಆರೋಗ್ಯವಾಗಿರಲು ಯೋಗ, ವಾಕಿಂಗ್ ಜತೆಗೆ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಗೆ ಯಾವುದೇ ಜಾತಿ, ಭೇದವಿಲ್ಲ. ಎಲ್ಲರೂ ಗ್ರಾಮೀಣ ಭಾಗದಿಂದ ಬಂದವರೆ ಹೆಚ್ಚಾಗಿದ್ದೀರಿ. ಅಂತಾರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಇಲ್ಲಿ ಇದ್ದಿರಿ ಎಲ್ಲರಿಗೂ ಶುಭವಾಗಲಿ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ನಿಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಸುವರ್ಣ ಅವಕಾಶ. ಆಟವನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕು. ನಾನು ಕೆಲಸದ ಒತ್ತಡಗಳಿಂದ ಆಟ ಆಡುವುದನ್ನೇ ಬಿಟ್ಟಿದ್ದೇನೆ. ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರೀಡೆ ಅಗತ್ಯ ಎಂದರು.
ಚುನಾವಣೆ ಸಂದರ್ಭವಾಗಿದ್ದರಿಂದ ಬಹಳ ಕಡಿಮೆ ಸಮಯದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದ್ದು, ಇದರಿಂದ ಚುನಾವಣಾ ಕೆಲಸದಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚಿನ ಹುಮ್ಮಸ್ಸಿನಿಂದ ಪಾಲ್ಗೊಳ್ಳಲು ಸಹಾಯವಾಗುತ್ತದೆ ಎಂದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಪಾಲಿಕೆ ಆಯುಕ್ತ ಡಾ.ಎಂ.ಎನ್. ಮಧು, ಅಪರ ಜಿಲ್ಲಾಧಿಕಾರಿ ಶಿವರಾಜು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಗೋವಿಂದರಾಜು, ಜಿಲ್ಲಾ ಕಾರ್ಯದರ್ಶಿ ರೇವಣ್ಣ, ವಿವಿಧ ಪದಾಧಿಕಾರಿಗಳಾದ ಎ.ಎಲ್. ಉಮೇಶ್, ಸಿ.ಎಸ್. ರಮೇಶ್‌ಕುಮಾರ್, ಎಂ.ಎಲ್. ವಿಶ್ವನಾಥ್, ಮಾಲಂಗಿ ಸುರೇಶ್, ಸತೀಶ್ ಜವರೇಗೌಡ, ಎಸ್.ಜೆ. ರಮೇಶ್, ಎಚ್.ಎಂ. ಗಿರೀಶ್, ಗಣೇಶ್.ಎನ್.ಕೆ, ಎನ್.ಎಂ. ಅಕ್ಕಮ್ಮ ಮತ್ತಿತರರಿದ್ದರು.