ಈಡಿಗ ಉಪ ಪಂಗಡಗಳ ಕಡೆಗಣನೆ ಆರೋಪ

11 hos 1
Published on

ಹೊಸನಗರ: ಈಡಿಗ ಬಿಲ್ಲವ ನಾಮಧಾರಿ ಸಮಾಜದ 26 ಉಪ ಪಂಗಡಗಳನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿ ತಾಲೂಕು ಕಚೇರಿ ಎದುರು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ ಮಾತನಾಡಿ, ಸಮಾಜದ ಶೇ.75ಕ್ಕಿಂತಲೂ ಹೆಚ್ಚಿನ ಜನ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಧರ್ಮಕ್ಷೇತ್ರ ಸಹ ಒಳಗೊಂಡ ಇಡೀ ಸಮಾಜ ಜರ್ಜರಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಕೆಂದರು.

ಶೈಕ್ಷಣಿಕ ಅಭಿವೃದ್ಧಿಗಾಗಿ ಸಮಾಜವನ್ನು ಪ್ರಸ್ತುತ ಪ್ರವರ್ಗ-2ಎ ಇರುವ ಮೀಸಲಾತಿಯನ್ನು ಪ್ರವರ್ಗ-1ಕ್ಕೆ ಸೇರಿಸಬೇಕು. ಬಿಲ್ಲವ ಈಡಿಗ ನಾಮಧಾರಿ ಸಮಾಜದ 26 ಉಪ ಪಂಗಡಗಳ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಠ 500 ಕೋಟಿ ರೂ. ಮೀಸಲಿಡಬೇಕು ಎಂದು ಆಗ್ರಹಿಸಿದರು.

ಭೂರಹಿತ ರೈತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿ ನಿವೇಶನರಹಿತರಿಗೆ ನಿವೇಶನ ಸಹಿತ ಮನೆ ಮಂಜೂರು ಮಾಡಬೇಕು. ಇತಿಹಾಸ ಪ್ರಸಿದ್ಧ ಸಿಗಂದೂರು ದೇಗುಲಕ್ಕೆ ನೇಮಿಸಿರುವ ಮೇಲ್ವಿಚಾರಣಾ ಸಮಿತಿ ಹಾಗೂ ಸಲಹಾ ಸಮಿತಿ ರದ್ದುಗೊಳಿಸಬೇಕು. ಸಮಾಜದ ಹಿರಿಯ ಡಾ. ರಾಮಪ್ಪ ಅವರ ಆಡಳಿತ ಮಂಡಳಿಯಲ್ಲಿ ಅನಾವಶ್ಯಕ ಹಸ್ತಕ್ಷೇಪ ಮಾಡದೇ ಈ ಹಿಂದಿನಂತೆ ಮುಂದುವರಿಯುವ ವ್ಯವಸ್ಥೆ ಕಲ್ಪಿಸಬೇಕು. ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯ್ಯರ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ವಿ.ಎಸ್.ರಾಜೀವ್ ಅವರಿಗೆ ಮನವಿ ಸಲ್ಲಿಸಿದರು.

ಬಿಎಸ್​ಎನ್​ಡಿಪಿ ತಾಲೂಕು ಅಧ್ಯಕ್ಷ ಹರಿದ್ರಾವತಿ ಉಮೇಶ್, ಪ್ರಧಾನ ಕಾರ್ಯದರ್ಶಿ ಹರಿದ್ರಾವತಿ ಶಿವರಾಜ್, ಮಂಡಾನಿ ಗುರುಮೂರ್ತಿ, ಪುಣಜೆ ಚಂದ್ರಶೇಖರ್, ಕೀರ್ತಿಕುಮಾರ್, ಗಣಪತಿ, ಪ್ರಶಾಂತ್, ಗಣೇಶ, ಯೋಗೇಂದ್ರ, ಗಂಗಾಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net