

ವಿಜಯಪುರ: ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬೆಲೆ ಏರಿಕೆ ಬಿಸಿ ಒಂದೆಡೆಯಾದರೆ ಇನ್ನೊಂದೆಡೆ ರೈತರ ಮಕ್ಕಳ ಶಿಷ್ಯವೇತನಕ್ಕೆ ಕತ್ತರಿ, ಕಿಸಾನ್ ಸಮ್ಮಾನ ಯೋಜನೆ ಕುರಿತ ದಿವ್ಯ ನಿರ್ಲಕ್ಷೃದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗದಪ್ರಹಾರ ನಡೆಸಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಕಿಸಾನ್ ಸಮ್ಮಾನ ಯೋಜನೆ ಆಧಾರವಾಗಿತ್ತು. ಅದಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ 4 ಸಾವಿರ ರೂ.ಗಳನ್ನು ಸಂದಾಯ ಮಾಡಬೇಕಿತ್ತು, ಈ ಹಿಂದಿನ ಬಿಜೆಪಿ ಸರ್ಕಾರ ಈ ಕಾರ್ಯ ಮಾಡಿತ್ತು, ಆದರೆ ರೈತರ ವಿಷಯದಲ್ಲಿಯೂ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಹಣ ನೀಡುವುದನ್ನು ನಿಲ್ಲಿಸಿ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ರೈತರ ಮಕ್ಕಳ ವಿದ್ಯಾನಿಧಿ ಯೋಜನೆಯನ್ನೂ ನಿಲ್ಲಿಸಿದೆ, ಬಿತ್ತನೆ ಬೀಜಗಳ ದರ ಏರಿಕೆ ಮಾಡಿ ಒಂದು ರೀತಿ ಮಣ್ಣಿನ ಮಕ್ಕಳ ರಕ್ತ ಹೀರುವ ಕಾರ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿದೆ ಎಂದು ವಾಗ್ದಾಳಿ ನಡೆಸಿದರು.
ತೀವ್ರ ಬರ ಪರಿಸ್ಥಿತಿಯಿಂದಾಗಿ ತೊಂದರೆ ಎದುರಿಸಿದ ರೈತರಿಗೆ ಬಿತ್ತನೆ ಬೀಜ ಕಡಿಮೆ ದರದಲ್ಲಿ ಸಿಗುವಂತೆ ನೋಡಿಕೊಳ್ಳುವುದನ್ನು ಬಿಟ್ಟು ವ್ಯತಿರಿಕ್ತವಾಗಿ ದರ ಏರಿಕೆ ಮಾಡಿದೆ, ಈ ಬಗ್ಗೆ ಪ್ರಶ್ನಿಸಿದರೆ ಬೇರೆ ರಾಜ್ಯದ ಕಡೆ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದರು.
ರಾಜ್ಯ ಸರ್ಕಾರ ಬಿತ್ತನೆ ಬೀಜ ದರ ಕಡಿಮೆ ಮಾಡುವುದಕ್ಕೆ ಯಾವ ಕ್ರಮವೂ ಕೈಗೊಳ್ಳುತ್ತಿಲ್ಲ, ಕೂಡಲೇ ಈ ಕಂಪನಿಗಳನ್ನು ಕರೆದು ಸಭೆ ನಡೆಸಿ ತನ್ನ ಬದ್ಧತೆ ಪ್ರದರ್ಶಿಸಬೇಕಾದ ರಾಜ್ಯ ಸರ್ಕಾರ ಇದೆನ್ನಲ್ಲವನ್ನೂ ಮರೆತು ಕುಳಿತಿದೆ ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸಹ ವಿಶೇಷ ಮುತವರ್ಜಿ ವಹಿಸಬೇಕು ಎಂದರು.