

ವಿಜಯಪುರ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ಮೇರೆಗೆ ಕೆೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಶಿರಸ್ತೆದಾರರಿಗೆ ಮನವಿ ಸಲ್ಲಿಸಿದರು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ನಿರಂತರ ತಿದ್ದುಪಡಿಯಿಂದ ಕಾರ್ಮಿಕರ ಬದುಕು ಅತಂತ್ರವಾಗುತ್ತಿದೆ. ಈಗಾಗಲೇ ಕಾರ್ಮಿಕರು ಹೋರಾಟ ಮಾಡಿ ಪಡೆದಿರುವ 44 ಕಾರ್ಮಿಕ ಕಾನೂನುಗಳನ್ನು 4 ಕೋಡ್‌ಗಳನ್ನಾಗಿ ಮಾಡಿ ಕಂಪನಿ ಪರವಾಗಿ ತಿದ್ದುಪಡಿ ಮಾಡುವುದನ್ನು ಜಂಟಿ ಕಾರ್ಮಿಕ ಸಂಘಟನೆಯಿಂದ ವಿರೋಧಿಸುತ್ತೇವೆ. ಕರೊನಾ ಪ್ರಕರಣದಿಂದ ಸಾವಿಗೀಡಾದ ಜನರನ್ನು ಮಾನವೀಯತೆ ಮರೆತು ಅಮಾನವೀಯವಾಗಿ ಆ ಶವಗಳನ್ನು ಬೀಸಾಡಿವುದು ನೋಡಿದರೆ ಸರ್ಕಾರಗಳ ನಿರ್ಲಕ್ಷೃ ಎದ್ದು ಕಾಣುತ್ತದೆ ಎಂದರು.
ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಗಾಂಧಿ ಮಾತನಾಡಿ, ಕೇಂದ್ರ ಸರ್ಕಾರ ಕೋವಿಡ್ -19 ಲಾಕ್‌ಡೌನ್ ಬಳಸಿಕೊಂಡು ದೇಶದ ಜನರ ಆಸ್ತಿಯಾದ ಸಾರ್ವಜನಿಕ ಉದ್ದಿಮೆಗಳಲ್ಲಿನ ಹೂಡಿಕೆ ಹಿಂತೆಗೆತ ಮತ್ತು ಖಾಸಗೀಕರಣ ಗೊಳಿಸಲು ಮುಂದಾಗಿದೆ. ಎಲ್ಲ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕಾರ್ಮಿಕ ಮೇಲೆ ಗುಲಾಮಗಿರಿಯನ್ನು ಹೇರಲು ಹೊರಟಿದೆ. ಜನತೆಗೆ ಆತ್ಮ-ನಿರ್ಭರ ಭಾರತ್ ಘೋಷಣೆಯನ್ನು ನೀಡಿ ಜನತೆ ಸಮಾಜ ಮತ್ತು ಸರ್ಕಾರದ ಮೇಲೆ ಅವಲಂಬಿತವಾಗಬಾರದೆಂದು ತಮ್ಮ ಸರ್ಕಾರ ಹೇಳುತ್ತಿದೆ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಶೇ.27ಕ್ಕೆ ತಲುಪಿದೆ. 40 ಕೋಟಿಗೂ ಹೆಚ್ಚು ಜನ ತೀವ್ರ ಬಡತನಕ್ಕೆ ತಳ್ಳಲಾಗಿದೆ. ಕಾರ್ಪೋರೇಟ್ ಭೂಮಾಲೀಕರ ಲಾಬಿ ಪರವಾಗಿ ಕೃಷಿ ಆರ್ಥಿಕತೆಯಲ್ಲಿನ ಅಕ್ರಮಣಕಾರಿ ರಚನಾತ್ಮಕ ಬದಲಾವಣೆಗಳು ಕೃಷಿಕರನ್ನು ಆಳವಾದ ದುಃಖಗಳಿಗೆ ಒಳಪಡಿಸುವುದರ ಜತೆಗೆ ಇಡೀ ಜನರಿಗೆ ಆಹಾರ ಸುರಕ್ಷತೆಗೆ ಅಪಾಯವನ್ನುಂಟು ಮಾಡಲಿದೆ.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಕೋವಿಡ್ ರೋಗವು ದೇಶದ ಜನತೆಯನ್ನು ಬಾಧಿಸುತ್ತಿದೆ. ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೆಲಸ ಮಾಡುತ್ತಿರುವ ಮುಂಚೂಣಿ ಯೋಧರಲ್ಲಿರುವ ಸುರಕ್ಷತಾ ಸಾಧನಗಳ ಬೇಡಿಕೆಯನ್ನು ಇದುವರೆಗೂ ಪೂರೈಸಿಲ್ಲ. ಅವರಿಗೆ ಯಾವುದೇ ಪ್ರೋತ್ಸಾಹಧನವನ್ನು ಕೇಂದ್ರ, ರಾಜ್ಯ ಸರ್ಕಾರಗಳು ನೀಡಿಲ್ಲ. ಲಾಕ್‌ಡೌನ್‌ನಿಂದ ಉಂಟಾದ ದುಷ್ಪರಿಣಾಮಗಳನ್ನು ಎದುರಿಸಲು ಯಾವುದೇ ಕ್ರಮ ಜರುಗಿಸಲಿಲ್ಲ. ಇನ್ನೊಂದು ಕಡೆ ಸಾರ್ವಜನಿಕ ಉದ್ದಿಮಿಗಳಾದ ರೈಲ್ವೆ ಖಾಸಗೀಕರಣ, ಬಿಎಸ್‌ಎನ್‌ಎಲ್ ಮುಂತಾದ ಖಾಸಗಿ ವಲಯಗಳನ್ನು ಮಾರಾಟ ಮಾಡಿ ದೇಶದ ಆರ್ಥಿಕತೆಯನ್ನು ಖಾಸಗಿ ಮಾಲೀಕತ್ವಕ್ಕೆ ವಹಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ ಎಂದರು.
ಎಸ್‌ಐಎ್ಟಿ ಜಿಲ್ಲಾ ಅಧ್ಯಕ್ಷರು ಪ್ರಭುಗೌಡ ಪಾಟೀಲ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ಎಐಟಿಯುಸಿ ಜಿಲ್ಲಾ ಸಮಿತಿ ಸದಸ್ಯರಾದ ವಿಠಲ ವನಮೋರೆ, ಎಸ್.ಎಸ್. ಆನಂದಶೆಟ್ಟಿ, ಸಿದ್ರಾಮ ಬಂಗಾರಿ, ಸುರೇಖಾ ಶಿವಣಗಿ, ರೇವಣಸಿದ್ದ ಬಿರಾದಾರ, ರಮೇಶ ಕೊತನೂರ, ಮಹಾದೇವ ಜೊಲ್ಲೆ, ಅನೀತಾ ರಾರೋಡ, ಶಿವಮ್ಮ ನಾಡವರ, ಸಂತೋಷ ಕೋಹಳ್ಳಿ, ಲಾಲಸಾಬ ಕೊರಬು, ಸಂಗಿತಾ ಪೂಜಾರಿ, ಮಾಬುಬಿ ಪಾಂಡುಗೋಳ, ಅಂಬು ಗೊಗರೆ, ಮತ್ತಿತರರು ಭಾಗವಹಿಸಿದ್ದರು.