

ಬೆಂಗಳೂರು:ಬಿಸಿಲಿನ ಪ್ರಖರತೆಯಿಂದ ರಾಜ್ಯ ಇನ್ನಷ್ಟು ಕೆಂಡವಾಗಿದೆ. ಉತ್ತರ ಕರ್ನಾಟಕ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ವಾಡಿಕೆಗಿಂತ 2-4 ಡಿ.ಸೆ.ಉಷ್ಣಾಂಶವೂ ಕ್ರಮೇಣ ಏರಿಕೆಯಾಗಲಿದೆ.
ರಾಜ್ಯದ ಶೇ.75 ಭೌಗೋಳಿಕ ಪ್ರದೇಶಗಳಲ್ಲಿ 38 ಡಿ.ಸೆ.ನಿಂದ 42.8 ಡಿ.ಸೆ. ವರೆಗೆ ಉಷ್ಣಾಂಶ ದಾಖಲಾಗುತ್ತಿದೆ.ಇದರಿಂದ ಬಿಸಿಗಾಳಿ,ರಣ ಬಿಸಿಲುಗೆ ಕರುನಾಡು ತತ್ತರಿಸಲಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಿಸಿ ವಾತಾವರಣ ಕಾಣಿಸಿಕೊಂಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಳ್ಳಾರಿ, ಕೊಪ್ಪಳ,ಯಾದಗಿರಿ,ರಾಯಚೂರಿನಲ್ಲಿ ಪ್ರಸ್ತುತ 40-42 ಡಿ.ಸೆ.ತಾಪಮಾನ ವರದಿಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮೇಲಿನ ಜಿಲ್ಲೆಗಳಲ್ಲಿ ಮಾ.19ರಿಂದ ಮಾ.21 ರವರೆಗೆ ಉಷ್ಣ ಅಲೆ(ಹೀಟ್ವೇವ್) ಅರ್ಲಟ್ ನೀಡಲಾಗಿದೆ.
ಬೆಂಗಳೂರು, ಚಾಮರಾಜನಗರ, ಚಿತ್ರದುರ್ಗ, ಹಾಸನ, ದಾವಣಗೆರೆ, ಮಂಡ್ಯ, ಚಿಂತಾಮಣಿ, 35-37 ಡಿ.ಸೆ. ದಾಖಲಾಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ಮುಂದಿನ 5 ದಿನ 2-3 ಡಿ.ಸೆ.ಉಷ್ಣಾಂಶ ಹೆಚ್ಚಳವಾಗಲಿದೆ. ಕರಾವಳಿ ಕರ್ನಾಟಕ ಭಾಗದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ರಾಜ್ಯದ ಹಲವು ಭಾಗಗಳಲ್ಲಿ ಪ್ರತಿ ಗಂಟೆಗೆ 30-40 ಕಿ.ಮೀ.ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಜಾಗತಿಕ ತಾಪಮಾನ ಏರಿಕೆ, ತೇವಾಂಶ ಕೊರತೆ, ಶುಭ್ರ ಆಕಾಶ, ಒಣಗಾಳಿ ಬೀಸುವುದೂ ಸೇರಿ ವಿವಿಧ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3-4 ಡಿ. ಸೆ. ಉಷ್ಣಾಂಶ ಹೆಚ್ಚಳವಾಗಿದೆ. ಈ ಬಾರಿ ವಾಡಿಕೆಗಿಂತ ಮುನ್ನವೇ ಶುರುವಾದ ಬೇಸಿಗೆ ಆರಂಭದಲ್ಲೇ ಸುಡುಬಿಸಿಲು ಕಾಣಿಸಿಕೊಂಡಿದ್ದು,ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿಯೇ ಅಧಿಕವಾಗಿದೆ.
ಬಿಸಿಲಿಗೆ ಮೈ ಒಡ್ಡಬೇಡಿ
ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚುತ್ತಿರುವುರಿಂದ ಹಗಲಿನ ವೇಳೆ ಸಾರ್ವಜನಿಕರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಯಥೆಚ್ಛವಾಗಿ ನೀರು ಕುಡಿಯಬೇಕು. ರೈತರು ಟೋಪಿ ಅಥವಾ ಛತ್ರಿ ಬಳಸಬೇಕು, ತಲೆ, ಕುತ್ತಿಗೆ, ಮುಖ, ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸಬೇಕು. ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಕುಡಿಯಲು ಸಾಕಷ್ಟು ನೀರು ನೀಡಬೇಕು. ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ಕಠಿಣ ಚಟುವಟಿಕೆಗಳನ್ನು ಕ್ರೀಡಾಪಟುಗಳು ನಡೆಸಬಾರದು ಮತ್ತು ಹೊರಗಡೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಪ್ರಯಾಣ ಮಾಡುವ ವೇಳೆ ನೀರು, ಜ್ಯೂಸ್, ಮಜ್ಜಿಗೆಯನ್ನು ಪ್ರಯಾಣಿಕರು ಕೊಂಡೊಯ್ಯಬೇಕೆಂದು ಇಲಾಖೆ ಸಲಹೆ ಕೊಟ್ಟಿದೆ.
ರಾಜ್ಯದಲ್ಲಿ ತಾಪಮಾನ ಹೆಚ್ಚಳವಾದಂತೆ ಮುಂಗಾರು ಪೂರ್ವ ಮಳೆಯೂ ಸುರಿಯಲಿದೆ. ಬೇಸಿಗೆ ಅವಧಿಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿಯೂ ಉಷ್ಣಾಂಶ ಹೆಚ್ಚಳವಾಗುತ್ತಿದೆ.
| ಸಿ.ಎಸ್.ಪಾಟೀಲ್, ಹವಾಮಾನ ಇಲಾಖೆ ನಿರ್ದೇಶಕ.