ಅರ್ಹರ ಹೆಸರು ವಾರದೊಳಗೆ ಸೇರ್ಪಡೆ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಹೇಳಿಕೆ

State Food Commission Chairman Press Conference Mandya
Published on

ಮಂಡ್ಯ: ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆ ಮಾಡುವ ವೇಳೆ ಅರ್ಹ ಫಲಾನುಭವಿಗಳ ಹೆಸರು ಸೇರ್ಪಡೆಯಾಗಿದೆ. ಇಂತಹವರನ್ನು ಇನ್ನೊಂದು ವಾರದಲ್ಲಿ ಪುನರ್ ಸೇರ್ಪಡೆ ಮಾಡಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಪರಿಶೀಲನೆ ವೇಳೆ ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದೆ. ಇದನ್ನು ಸರಿಪಡಿಸಲು ಆಹಾರ ಇಲಾಖೆ ಹಾಗೂ ಆಯೋಗ ಮುಂದಾಗಿದೆ. ಈ ಬಗ್ಗೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಅಧಿಕಾರಿಗಳು ಸರಿಪಡಿಸಲು ಎರಡು ದಿನ ಸಮಾಯಾವಕಾಶ ಕೇಳಿದ್ದಾರೆ. ಆದರೆ, ನಾವು ಒಂದು ವಾರವೇ ಸಮಯ ನೀಡಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯಬೇಕೆಂದು ಹೇಳಿದರು.

ಇನ್ನು ಜಿಲ್ಲೆಯಲ್ಲಿ 4 ಅಂಗನವಾಡಿ ಆಹಾರ ತಯಾರಿಕಾ ಘಟಕಗಳಿವೆ. ಈವರೆಗೂ ಬೇರೆ ಕಡೆಯಿಂದ ಆಹಾರವನ್ನು ತರಿಸಿಕೊಂಡು 1 ಘಟಕದಿಂದ ತಲಾ 2 ತಾಲೂಕಿನ ಅಂಗನವಾಡಿಗೆ ನೀಡಲಾಗುತ್ತಿತ್ತು. ಇನ್ನು ಮುಂದೆ ಎಲ್ಲ ಅಂಗನವಾಡಿಗೆ ಆಹಾರ ಪದಾರ್ಥಗಳನ್ನು ಜಿಲ್ಲೆಯ ಆಹಾರ ಘಟಕದಲ್ಲಿಯೇ ತಯಾರಿಸಿ ನೀಡಲಾಗುತ್ತದೆ. ಕಳೆದ ಬಾರಿ ಜಿಲ್ಲೆಯಲ್ಲಿ ಮೂರು ದಿನ ಪ್ರವಾಸ ನಡೆಸಿ ನ್ಯೂನ್ಯತೆ ಕಂಡುಹಿಡಿದು ಪರಿಶೀಲನೆ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಮಂಡ್ಯ ಮತ್ತು ದುದ್ದ ಎಂಎಸ್‌ಪಿಸಿ ಘಟಕ ಬೂದನೂರಿಗೆ ಭೇಟಿ ನೀಡಿದಾಗ ಅಲ್ಲಿ ಅನೇಕ ಸಮಸ್ಯೆ ಕಂಡುಬಂದಿತ್ತು. ಸರಿಯಾದ ದಾಖಲೆಗಳಿಲ್ಲದ ಕಾರಣ ಐವರು ಸಿಬ್ಬಂದಿಯನ್ನು 1 ತಿಂಗಳು ಅಮಾನತುಗೊಳಿಸಲಾಗಿತ್ತು. ಈಗ ಅವರು ತಮ್ಮ ತಪ್ಪು ಸರಿಪಡಿಸಿಕೊಂಡು ಸರಿಯಾದ ವರದಿ ಹಾಗೂ ದಾಖಲಾತಿ ಸಲ್ಲಿಸಿರುವುದರಿಂದ ಮತ್ತೆ ಇಂತಹ ಪ್ರಮಾದ ಮರುಕಳಿಸಬಾರದೆಂದು ಸೂಚಿಸಿ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದರು.

ತಪ್ಪು ಎಲ್ಲರೂ ಸಹಜವಾಗಿ ಮಾಡುತ್ತಾರೆ. ಆದರೆ ಆ ತಪ್ಪನ್ನು ಪದೆ ಪದೇ ಎಸಗಬಾರದು. ತಾವು ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಸರಿ ದಾರಿಯಲ್ಲಿ ನಡೆಯುವುದಾಗಿ ತಿಳಿಸಿದಾಗ ಅವರಿಗೆ ಮತ್ತೊಂದು ಅವಕಾಶವನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ. ಮತ್ತೆ ಇದೇ ರೀತಿಯ ತಪ್ಪುಗಳು ಕಂಡುಬಂದಲ್ಲಿ ಅವರನ್ನು ಶಾಶ್ವತವಾಗಿ ಕೆಲಸದಿಂದ ತೆಗೆಯಲಾಗುವಂತೆ ಎಚ್ಚರಿಕೆ ನೀಡಿದ್ದೇನೆ. ಇನ್ನು ಕಳೆದ ತಿಂಗಳು ಮಿಮ್ಸ್‌ಗೆ ಭೇಟಿ ನೀಡಿದಾಗ ಅಲ್ಲಿನ ಆಹಾರ ಘಟಕದಲ್ಲಿ ಆಹಾರವನ್ನು ತಯಾರಿಸಿ ರೋಗಿಗಳಿಗೆ ನೀಡುವಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಲು ತಿಳಿಸಲಾಗಿತ್ತು. ಈ ಸಂಬಂಧ ಮಿಮ್ಸ್ ಆಡಳಿತ ಮಂಡಳಿ ಟೆಂಡರ್ ಕರೆಯಲಾಗಿದ್ದು, ಪ್ರಕ್ರಿಯೆ ಹಂತದಲ್ಲಿದೆ. ಜಿಲ್ಲೆಯಲ್ಲಿರುವ ಅನೇಕ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಚಿವರು, ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಅಧಿಕಾರಿಗಳನ್ನೊಳಗೊಡಂತೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಪಿ.ಎಸ್.ಆಶಾ, ಮಂಡ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಕೆ.ಕುಮಾರಸ್ವಾಮಿ, ನಗರಸಭೆ ಮಾಜಿ ಸದಸ್ಯ ಅಮ್ಜದ್ ಪಾಷಾ, ಮುಖಂಡ ಸೋಮು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net