

ಗೌರಿಬಿದನೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವಲ್ಲಿ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಬ್ಲಾಕ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ ಹಾಗೂ ಜಿಟಿಟಿಸಿ ಸಂಸ್ಥೆಯ ಬಾಲಕ ಮತ್ತು ಬಾಲಕಿಯರ ವಸತಿ ನಿಲಯ ಮತ್ತು ನೂತನ ನಾಡ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಮಾತನಾಡಿದರು.
ಎನ್‌ಇಪಿ ಜಾರಿಯಾದಲ್ಲಿ ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ ಪಠ್ಯ ವಿಷಯ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಆದ್ದರಿಂದ ಈ ನೀತಿ ಅನುಷ್ಠಾನಗೊಳಿಸುವಲ್ಲಿ ಹಾಗೂ ತಂತ್ರಜ್ಞಾನದ ಬಳಕೆಯಲ್ಲಿ ರಾಜ್ಯ ಮೈಲಿಗಲ್ಲು ಸಾಧಿಸಿದೆ. 8000 ಶಾಲಾ ಕೊಠಡಿಗಳಲ್ಲಿ 2500 ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮ್‌ಗಳನ್ನಾಗಿ ಪರಿವರ್ತಿಸಲಾಗಿದೆ. ಉಳಿದ 6500 ಶಾಲಾ ಕೊಠಡಿಗಳನ್ನು ಶೀಘ್ರ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಡಿಜಿಟಲ್ ಕೌಶಲ ಕಲಿಕೆಗೆ ಆದ್ಯತೆ: ತಾಂತ್ರಿಕ ಶಿಕ್ಷಣ ಪಡೆಯುವುದರಿಂದ ನಿಮ್ಮ ಕನಸಿನ ಕೆಲಸ ದೊರೆಯುವ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆವಿಷ್ಕಾರ ಮತ್ತು ತಂತ್ರಜ್ಞಾನದಿಂದ ಉದ್ಯೋಗದ ಕೊರತೆ ನೀಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಫ್ಯೂಚರ್ ಮತ್ತು ಡಿಜಿಟಲ್ ಕೌಶಲ ಕಲಿಕೆಗೆ ಆದ್ಯತೆ ನೀಡುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಸಮಾನತೆ ಸಾಧ್ಯವಿಲ್ಲ:ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಅಧಿಕಾರ ಶಾಶ್ವತವಲ್ಲ. ಮತ ಕೇಳುವಾಗ ಜನರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಪದವಿಗೇರುವ ನಾವು ಬಳಿಕ ಜನರ ಹೆಗಲ ಮೇಲೆ ಸವಾರಿ ಮಾಡಬಾರದು. ಜನರು ನೀಡುವ ಮತ ಹಾಗೂ ತೆರಿಗೆ ಹಣದಿಂದ ಸರ್ಕಾರ ನಡೆಸಲಾಗುತ್ತಿದೆ. ರಾಜಕಾರಣಿಗಳ ಮಕ್ಕಳ್ಯಾರು ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಓದುವುದಿಲ್ಲ. ಬಡ ಮತ್ತು ಗ್ರಾಮೀಣ ಮಕ್ಕಳು ಇಲ್ಲಿಗೆ ಬರುತ್ತಾರೆ. ಅವರಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ 28,000 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡುತ್ತಿದೆ. ಆರ್ಥಿಕ ಸ್ಥಿತಿವಂತರು ಸರ್ಕಾರಿ ಕಾಲೇಜುಗಳಿಗೆ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಭ್ರಷ್ಟಾಚಾರ ನಿರ್ಮೂಲನೆಯಾಗದ ಹೊರತು ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ನೋಟಿಗಾಗಿ ವೋಟು ಪದ್ಧತಿ ಹೋಗಬೇಕು ಎಂದರು.
ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲಿ ವಿಫುಲ ಅವಕಾಶಗಳಿದ್ದು, ಯುವ ಪೀಳಿಗೆ ಉತ್ತಮ ವ್ಯಾಸಂಗದ ಜತೆಗೆ ತಮ್ಮದೇ ಆದ ಕೌಶಲ ಬೆಳೆಸಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬೇಕು ಎಂದರು. ನಗರಸಭೆ ಅಧ್ಯಕ್ಷೆ ರೂಪಾ ಅನಂತರಾಜು, ಎಡಿಸಿ ಅಂಬರೀಷ್, ತಹಸಿಲ್ದಾರ್ ಎಚ್.ಶ್ರೀನಿವಾಸ್, ತಾಪಂ ಇಒ ಹರೀಶ್, ಪ್ರಾಂಶುಪಾಲ ಶಿವಣ್ಣ, ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ್ ಇತರರು ಇದ್ದರು.