ಶ್ರವಣದೋಷ ಶಸ್ತ್ರಚಿಕಿತ್ಸೆಯಲ್ಲಿ ದೇಶದಲ್ಲೇ ರಾಜ್ಯ ಪ್ರಥಮ: ಸಚಿವ ದಿನೇಶ್ ಗುಂಡೂರಾವ್

mysore
Published on

ಮೈಸೂರು: ಶ್ರವಣದೋಷ ಶಸ್ತ್ರಚಿಕಿತ್ಸೆ(ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ)ಯಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, 2023-24ನೇ ಸಾಲಿನಲ್ಲಿ 353 ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.


ಆರೋಗ್ಯ ಇಲಾಖೆಯಿಂದ ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗೆ ‘ಶ್ರವಣ ಸಂಜೀವಿನಿ ಯೋಜನೆ’ ಎಂಬುದಾಗಿ ಮರುನಾಮಕರಣ, ಇಂಪ್ಲಾಂಟ್ ಕಾಪಾಡುವಿಕೆ, ವಾಕ್ ಮತ್ತು ಶ್ರವಣ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯನ್ನು ಮೊದಲ ಬಾರಿಗೆ ತಂದರು. 2ನೇ ಬಾರಿಗೆ ಸಿಎಂ ಆಗಿರುವ ಅವರು, ಈ ಯೋಜನೆಗೆ ವಿಶೇಷ ಆದ್ಯತೆ ನೀಡಿದ್ದು, ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಿ ವಾಕ್ ಮತ್ತು ಶ್ರವಣ ಉತ್ತಮಪಡಿಸಲು ರಾಜ್ಯ ಸರ್ಕಾರ ಈ ಬಾರಿ 32 ಕೋಟಿ ರೂ. ಅನುದಾನ ಮೀಸಲಿಟ್ಟಿದೆ ಎಂದರು.


ಕಿವುಡುತನ ಹುಟ್ಟುವಾಗಲೇ ಕೆಲವು ಮಕ್ಕಳಿಗೆ ಬರುತ್ತದೆ. ಇಂತಹ ಮಕ್ಕಳಿಗೆ ಶ್ರವಣ ಸಾಧನ ಅಳವಡಿಸುವ ಮೂಲಕ ಅಲ್ಪಸ್ವಲ್ಪ ಕೇಳಿಸುವಂತೆ ಮಾಡಬಹುದಾಗಿದೆ. ತೀವ್ರ ಕಿವುಡತನಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ 12 ಲಕ್ಷ ರೂ.ನಿಂದ 15 ಲಕ್ಷ ರೂ. ಖರ್ಚಾಗಲಿದೆ. ಇದು ಬಡವರಿಗೆ ಅಸಾಧ್ಯ. ಇದರಿಂದ ಸರ್ಕಾರದ ವತಿಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದ್ದು, ಬಡವರು, ಮಧ್ಯವರ್ಗದವರಿಗೆ ಅನುಕೂಲವಾಗಲಿದೆ ಎಂದರು.


27 ಆಸ್ಪತ್ರೆಗಳಲ್ಲಿ ಆಪರೇಷನ್


ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆಯಾದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲು ರಾಜ್ಯದಲ್ಲಿ 27 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ ಪೈಕಿ 12 ಸರ್ಕಾರಿ ಆಸ್ಪತ್ರೆಗಳು, ಉಳಿದವು ಖಾಸಗಿ ಆಸ್ಪತ್ರೆಗಳಾಗಿವೆ. ಶ್ರವಣ ದೋಷ ಇರುವ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಶಸ್ತ್ರಚಿಕಿತ್ಸೆ ಹಾಗೂ ಶ್ರವಣ ಸಾಧನಗಳ ಅಳವಡಿಕೆ ಮೂಲಕ ಗುಣಪಡಿಸಿ ‘ಶ್ರವಣ ದೋಷ ಮುಕ್ತ ಕರ್ನಾಟಕ’ ಮಾಡುವುದು ನಮ್ಮ ಗುರಿ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.


ಕಿವುಡುತನದಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಸ್ವಂತ ಚಟುವಟಿಕೆಗಳ ನಿರ್ವಹಣೆಯೂ ಕಷ್ಟವಾಗಲಿದೆ. ಇಂತಹ ಮಕ್ಕಳನ್ನು ವಿಶೇಷ ಶಾಲೆಗೆ ಸೇರಿಸಬೇಕಾಗುತ್ತದೆ. ದೊಡ್ಡವರಾದ ಬಳಿಕ ಕೆಲಸವೂ ಸಿಗಲ್ಲ. ಜೀವನ ನಿರ್ವಹಣೆ ಕಠಿಣವಾಗಿ, ಪಾಲಕರಿಗೆ ಹೊರೆಯಾಗಬೇಕಾಗುತ್ತದೆ. ಆದ್ದರಿಂದ ಮಗು ಜನಿಸಿ 8-10 ತಿಂಗಳಲ್ಲೇ ಶ್ರವಣ ದೋಷವನ್ನು ಪಾಲಕರು ಗುರುತಿಸಿ, ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.


ಮಕ್ಕಳಿಗೆ ಮರುಜೀವ: ಶ್ರವಣ ದೋಷವುಳ್ಳವರು ಸಹ ಸಹಜ ಜೀವನ ನಡೆಸಲು ಅವಕಾಶವಿದೆ. ಅದಕ್ಕಾಗಿ ಪೂರಕ ವಾತಾವರಣ, ತಪಾಸಣೆ, ಚಿಕಿತ್ಸೆ ಕೊಡಿಸಲು ಈ ಯೋಜನೆಗೆ ಶ್ರವಣ ಸಂಜೀವಿನಿ ಯೋಜನೆ ಎಂದು ಮರುನಾಮಕರಣ ಮಾಡಲಾಗಿದೆ. ಇದು ಕಿವುಡತನದಿಂದ ಬಳಲುತ್ತಿರುವ ಮಕ್ಕಳಿಗೆ ಮರುಜೀವ ಕೊಡಲಿದೆ ಎಂದರು.


8 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಈ ಸಮಸ್ಯೆಯನ್ನು ಪತ್ತೆಹಚ್ಚುವುದು ವಿಳಂಬವಾದಷ್ಟು ಈ ಶಸ್ತ್ರಚಿಕಿತ್ಸೆ, ಸಾಧನಗಳ ಅಳವಡಿಕೆಯೂ ಪ್ರಯೋಜನಕ್ಕೆ ಬರಲ್ಲ. ಶ್ರವಣ ದೋಷ ಹೊಂದಿರುವ ಮಕ್ಕಳ ಪಾಲಕರು ಆತಂಕಪಡಬಾರದು. ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆ ಆರೋಗ್ಯ ಇಲಾಖೆಯ ಮೊದಲ ಆದ್ಯತೆಯಾಗಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕೆಲ ಮಕ್ಕಳಿಗೆ ಶ್ರವಣ ದೋಷ ಹುಟ್ಟಿನಿಂದ ಬರುತ್ತದೆ. ಕೆಲವು ಮಕ್ಕಳಿಗೆ ಹಲವು ಕಾರಣಗಳಿಂದ ಬರುತ್ತದೆ. ಯಾವುದೇ ಮಗು ಶ್ರವಣದೋಷ ಸಮಸ್ಯೆ ಎದುರಿಸಬಾರದು. ಶ್ರವಣ ದೋಷ ಇರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಕಿವಿ ಕೇಳುವ ಹಾಗೆ ಮಾಡಬೇಕು ಎಂದರು.


ಫಲಾನುಭವಿ ಮಕ್ಕಳಿಗೆ ಶ್ರವಣ ಸಾಧನಗಳು ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಕಿಟ್‌ಗಳನ್ನು ವಿತರಿಸಲಾಯಿತು. ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ. ಪುಷ್ಪಲತಾ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ, ಮೈಸೂರು ವಿಭಾಗೀಯ ಸಹ ನಿರ್ದೇಶಕಿ ರಾಜೇಶ್ವರಿದೇವಿ ಇದ್ದರು.

ನನಗೆ ಮರಳಿ ಧ್ವನಿ ಕೊಟ್ಟಿದ್ದು ಆಯಿಷ್


ನನಗೆ ಧ್ವನಿ ಇಲ್ಲದ ಸಂದರ್ಭದಲ್ಲಿ ಆಯಿಷ್ ದ್ವನಿ ನೀಡಿತು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.


ಆ ಒಂದು ಘಟನೆಯಿಂದ ನಾನೂ ಮಾತು ಕಳೆದುಕೊಂಡಿದ್ದೆ. ಶಸ್ತ್ರಚಿಕಿತ್ಸೆ ಬಳಿಕ ಸೂಕ್ತ ತರಬೇತಿ ಪಡೆದುಕೊಂಡೆ. ಇದರ ಫಲವಾಗಿ ಮಾತು ಬಂದಿದೆ. ಮಾತನಾಡುವ ಅವಕಾಶವನ್ನು ಮತ್ತೊಮ್ಮೆ ಕಲ್ಪಿಸಿಕೊಟ್ಟಿದ್ದು ಈ ಸಂಸ್ಥೆ ಎಂದು ಸ್ಮರಿಸಿದರು.


ಶ್ರವಣ ದೋಷಕ್ಕೆ ತುತ್ತಾಗಿರುವವರಲ್ಲಿ ಉತ್ತರ ಕರ್ನಾಟಕದ ಮಕ್ಕಳು ಅಧಿಕ. ಬುದ್ಧಿಮಾಂದ್ಯ ಮಕ್ಕಳು ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧ್ಯಯನ, ಸಂಶೋಧನೆ ಮಾಡಿ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net