ವಿಜಯನಗರ ಬರ ಪೀಡಿತ ಪ್ರದೇಶವೆಂದು ಘೊಷಿಸಿ, ರಾಜ್ಯ ರೈತ ಸಂಘದಿಂದ ಹೊಸಪೇಟೆಯಲ್ಲಿ ಪ್ರತಿಭಟನೆ

PROTEST
ಮಳೆ ಕೊರತೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಹೊಸಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಶ್ವಜೀತ್ ಮೆಹತಾಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಪ್ರಮುಖರಾದ ಜೆ.ಜಹಿರುದ್ದೀನ್, ಬಿ.ವಿ.ಗೌಡ, ಜಡೆಪ್ಪ ಮೆಟ್ರಿ, ಟಿ.ನಾಗರಾಜ, ಮಹೇಶ ದೇವರಮನೆ, ಕೆ.ಜಾಕೀರ್, ಕೆ.ಮೂರ್ತಿ, ಮಹರಾಜ್, ದುರುಗಪ್ಪ, ಸಿಂದಿಗೇರಿ ಧರ್ಮೆಂದ್ರ, ಜೆ.ಜಿ.ವಿರೂಪಾಕ್ಷಿ, ಕೆ.ಮೂರ್ತಿ ಇದ್ದರು.
Published on

ಹೊಸಪೇಟೆ: ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಮಳೆ ಕೊರತೆಯಿಂದ ಶೇ.60 ಬೆಳೆ ಒಣಗಿದ್ದರಿಂದ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮಹತ್ಮಾಗಾಂಧಿ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ್ ಕಚೇರಿಗೆ ತಲುಪಿ ಮುಕ್ತಾಯಗೊಂಡಿತು. ಮೆರವಣಿಗೆಯುದ್ದಕ್ಕೂ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಧಿಕ್ಕಾರ ಕೂಗಿದರು. ಬಳಿಕ ತಹಸೀಲ್ದಾರ್ ವಿಶ್ವಜೀತ್ ಮೆಹತಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಭರವಸೆ ನೀಡಿತ್ತು ಆದರೆ, ವಿಧಾನಸಭೆ ಚುನಾವಣೆ ನಡೆದು ಕೆಲ ತಿಂಗಳು ಕಳೆದರೂ ಕಾಯ್ದೆಗಳನ್ನು ರದ್ದುಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿ ಮುಂಗಾರು ಹಂಗಾಮು ಬಹುತೇಕ ಕೈಕೊಟ್ಟಿದೆ. ನಿರೀಕ್ಷೆಗಿಂತ ವಿಳಂಬವಾಗಿ ಆರಂಭಗೊಂಡ ಮುಂಗಾರು ಮಳೆ ಕೆಲ ದಿನಗಳ ಕಾಲ ಚುರುಕು ಪಡೆದಿತ್ತಾದರೂ, ಮತ್ತೆ ಮಳೆ ಮಾಯವಾಗಿದೆ. ಪರಿಣಾಮ ಜಿಲ್ಲೆಯ ಮೆಕ್ಕೆಜೋಳ, ಹತ್ತಿ ಮತ್ತಿತರ ಬೆಳೆಗಳು ಒಣಗುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ, ಸರ್ಕಾರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಭಾಗದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು. ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸಬೇಕು. ಅರಣ್ಯ ಅಂಚಿನಲ್ಲರುವ ಜಮೀನುಗಳಲ್ಲಿ ಬೆಳೆದ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದ್ದು, ವನ್ಯಜೀವಿಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಬೇಕು. ರೈತರ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು.

ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ರೂ. ನೀಡುತ್ತಿದ್ದು, ಈ ಹಿಂದಿನ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ನೆರವು ಮುಂದುವರಿಸಿ ಒಟ್ಟು 10 ಸಾವಿರ ರೂ. ಒದಗಿಸಬೇಕು. ನೆಲ್ಲಾಪುರ ಭಾಗದಲ್ಲಿ 120 ಎಕರೆ ವಿಸ್ತೀರ್ಣವುಳ್ಳ ಐತಿಹಾಸಿಕ ಕೆರೆಯಿದ್ದು, ಈ ಕೆರೆಗೆ ನೀರಾವರಿ ಯೋಜನೆ ಮಾಡಿದರೆ 2600 ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಬಹುದು ಎಂದು ತಿಳಿಸಿದರು.

ಕೊಟ್ಟೂರಿನಲ್ಲಿ 1 ಲಕ್ಷ ಟನ್ ರಸಗೊಬ್ಬರ ಸಂಗ್ರಹಣೆಗೆ ರೇಖ್ ಪಾಯಿಂಟ್ ಸ್ಥಾಪಿಸಬೇಕು. ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಭಾಗದಲ್ಲಿ ಭತ್ತ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಲೇ ತೆರೆಯಬೇಕು ಮತ್ತು ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net