ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಮತದಾನ ಬಹಿಷ್ಕರಿಸುವ ಎಚ್ಚರಿಕೆ

11
Published on

ಮೈಸೂರು: ರೇಷ್ಮೆ ಬೆಳೆಗಾರರಿಗೆ ಅಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಿ ಸಾಮಾಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ನಂಜನಗೂಡು ರಸ್ತೆಯ ಬಂಡೀಪಾಳ್ಯದ ಬಳಿ ಇರುವ ರೇಷ್ಮೆ ಹರಾಜು ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.
ರೇಷ್ಮೆಗೂಡಿಗೆ ಗುಣಮಟ್ಟದ ಮೇಲೆ ವೈಜ್ಞಾನಿಕವಾಗಿ ದರ ನಿಗದಿಯಾಗುತ್ತಿಲ್ಲ. ದಲ್ಲಾಳಿಗಳು ಮನಬಂದಂತೆ ದರ ನಿಗದಿಪಡಿಸಿದರೂ ಅಧಿಕಾರಿಗಳು ಇದನ್ನು ತಡೆಯುವ ಪ್ರಯತ್ನ ಮಾಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಮನಗರದಲ್ಲಿ ಕಳಪೆ ಗೂಡಿಗೆ ನಿಗದಿಯಾಗುವ ದರಕ್ಕಿಂತಲೂ ಕಡಿಮೆ ದರವನ್ನು ಮೈಸೂರಿನಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಗೂಡಿಗೆ ನಿಗದಿಪಡಿಸಲಾಗುತ್ತಿದೆ ಎಂದು ದೂರಿದರು.
ಕಡಿಮೆ ದರ ಎಂದು ರೇಷ್ಮೆ ಬೆಳೆಗಾರರು ಹರಾಜಿಗೆ ಒಪ್ಪದಿದ್ದಾಗ ಎರಡನೇ ಹರಾಜಿನಲ್ಲಿ ಮೊದಲಿನ ದರಕ್ಕಿಂತಲೂ ಕಡಿಮೆ ದರವನ್ನು ಕೂಗಲಾಗುತ್ತದೆ. ಇದರಲ್ಲಿ ದಲ್ಲಾಳಿಗಳು ಶಾಮೀಲಾಗಿ ಹೊಂದಾಣಿಕೆಯಿಂದ ದರ ಇಳಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲುತ್ತಾರೆ ಎಂದು ಟೀಕಿಸಿದರು.
ರೇಷ್ಮೆ ತಜ್ಞರಿಂದ ದರ ನಿಗದಿಪಡಿಸಬೇಕು, ನಗರದಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರ (ಸಿಎಸ್‌ಆರ್‌ಟಿ) ಸಹಾಯ ಪಡೆದು ಗುಣಮಟ್ಟ ನಿಗದಿ ಪಡಿಸಬೇಕು ಎಂದು ಆಗ್ರಹಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ರೇಷ್ಮೆ ಇಲಾಖೆ ಅಧಿಕಾರಿಗಳು ನೆರೆದಿದ್ದ ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ಬೆಳೆಗಾರರಿಗೆ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದ್ದು, ಚುನಾವಣೆ ಮುಗಿದ ಬಳಿಕ ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಎರಡನೇ ಹರಾಜಿನ ಸಮಯದಲ್ಲಿ ರೈತರಿಗೆ ಬೇಕೆಂದೇ ಕಡಿಮೆ ದರವನ್ನು ಕೂಗುತ್ತಿರುವುದು ಎದ್ದು ಕಾಣುತ್ತಿದ್ದು, ಇದರ ಬಗ್ಗೆಯೂ ನಾವು ಬೇಗ ಕ್ರಮ ವಹಿಸುತ್ತೇವೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕಿ ಪ್ರತಿಮಾ, ಉಪ ನಿರ್ದೇಶಕಿ ಮಂಜುಳಾ, ಮೈಸೂರು ಮಾರುಕಟ್ಟೆಯ ಸಹಾಯಕ ನಿರ್ದೇಶಕ ಸೋಮಣ್ಣ ಇದ್ದರು.
ರೇಷ್ಮೆ ಬೆಳೆಗಾರರಾದ ನಟರಾಜು ಚಾಮರಾಜನಗರ, ಬಸವನಪುರ ಸದಾನಂದ , ಚಿನಂಬಳ್ಳಿ ಮಹೇಶ್, ಬೀರಿಹುಂಡಿ ಮಹೇಶ್ , ದೊಡ್ಡುಂಡಿ ಕೃಷ್ಣ ಅವರು ಮಾರುಕಟ್ಟೆಯಲ್ಲಿ ಅಗುತ್ತಿರುವ ಸಮಸ್ಯೆ, ಆಗುತ್ತಿರುವ ಮೋಸದ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ರೈತ ಸಂಘಟನೆಯ ಪ್ರಮುಖರಾದ ವಿದ್ಯಾಸಾಗರ್ ರಾಮೇಗೌಡ, ಹೊನ್ನೂರು ಪ್ರಕಾಶ್, ಮಂಜು ಕಿರಣ್ , ರಘು ಹಿಮ್ಮಾವು , ಸತೀಶ್ ರಾವ್ , ವೆಂಕಟೇಶ್ ಗಳಿಗರಹುಂಡಿ , ಮಹೇಶ್ ಗುಂಡ್ಲುಪೇಟೆ , ಅಹಲ್ಯಾ ನಾಗರಾಜು, ನಟರಾಜು, ಕಳ್ಳಿಪುರ ಮಹದೇವಸ್ವಾಮಿ, ಅಲ್ಗಂಚಿ ದೊಡ್ಡಯ್ಯ, ಶೈಲಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net