28 ರಂದು ರಾಜ್ಯ ರೈತ ಸಂಘ ಪ್ರತಿಭಟನೆ

PROTEST
Published on

ಕಾರ್ಖಾನೆಗಳಿಗಾಗಿ ಭೂಮಿ ಕಳೆದುಕೊಂಡ ರೈತರೊಡನೆ ಆ.28ರಂದು ಬೆಳಗ್ಗೆ 11ಕ್ಕೆ ಕಡಕೊಳ ಕೈಗಾರಿಕಾ ಪ್ರದೇಶದ ನೀರು ಸರಬರಾಜು ಘಟಕದ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ರಘು ಇಮ್ಮಾವು ತಿಳಿಸಿದರು.

ತಾಲೂಕಿನ ಜಯಪುರ ಹೋಬಳಿಯ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ಮೆ ಸಿರಿನ್ ಪ್ರೈವೇಟ್ ಲಿ., ಎಸ್‌ಕೆಎಫ್ ಪ್ರೈ.ಲಿ, ಆಟೋ ಲಿವ್ ಸೇರಿದಂತೆ ಹಲವು ಕಾರ್ಖಾನೆಗೆಳು ಸುಮಾರು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಕಾರ್ಖಾನೆಗಳ ಉಪಯೋಗಕ್ಕೆ ಹಾಗೂ ಕೈಗಾರಿಕಾ ಪ್ರದೇಶದ ರಸ್ತೆಗಳಿಗೆ ಮತ್ತು ಕಾರ್ಖಾನೆಯ ನೀರು ಪೂರೈಕೆ ಕೇಂದ್ರಕ್ಕೆ, ವಿದ್ಯುತ್ ಪೂರೈಕೆ ಕೇಂದ್ರ ಹಾಗೂ ಕೈಗಾರಿಕಾ ಪ್ರದೇಶದ ಇತರ ಉದ್ದೇಶಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರ ನಿಯಮಾನುಸಾರ ರೈತರ ಮಕ್ಕಳಿಗೆ ಕಾಯಂ ಉದ್ಯೋಗ ನೀಡಬೇಕು ಎಂಬ ನಿಯಮ ಇದ್ದರೂ ಇದುವರೆಗೂ ಉದ್ಯೋಗ ನೀಡದೆ ವಂಚಿಸುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಗ ಭೂಮಿ ಕಳೆದುಕೊಂಡ ರೈತರ ಮತ್ತು ಸುತ್ತಮುತ್ತಲ ಗ್ರಾಮಸ್ಥರ ಹಾಗೂ ಇತರ ಸಂಘಟನೆಗಳ ಜತೆಗೂಡಿ ನಮ್ಮ ಸಂಘಟನೆ ನೇತೃತ್ವದಲ್ಲಿ ಹಲವು ಬಾರಿ ಹೋರಾಟ ನಡೆಸಿದ್ದರೂ ಈವರೆಗೂ ಉದ್ಯೋಗ ನೀಡಲ್ಲ. ಹೀಗಾಗಿ ಆ.28ರಂದು ಕಡಕೊಳ ಕೈಗಾರಿಕಾ ಪ್ರದೇಶದಲ್ಲಿನ ನೀರು ಪೂರೈಕೆ ಘಟಕದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ಮುಖಂಡರಾದ ಶಂಕರನಾಯಕ ಹೆಡತಲೆ, ಶ್ರೀಧರ್, ಜಿ.ಮಂಜುನಾಥ್, ಕೆ.ಜಿ.ಶಿವಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net