

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿ ಕೇಂದ್ರದ ಉಪ ಕೃಷಿ ಇಲಾಖೆ ಕಚೇರಿ ಬಳಿ ಗುರುವಾರ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸರ್ಕಾರದ ಯೋಜನೆಗಳ ವಿತರಣೆಯಲ್ಲಿ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಬೆಳೆಗಳ ಸಬ್ಸಿಡಿ ಯೋಜನೆಗಳಿಗೆ ವಂತಿಕೆ ಕಟ್ಟಿಸಿಕೊಂಡ ಎಲ್ಲ ರೈತರಿಗೆ ಸೌಲಭ್ಯ ನೀಡಬೇಕು. ಲಾಟರಿ ಪದ್ಧತಿ ಕೈಬಿಡಬೇಕು ಎಂದರು.
ತಾಡಪಲ್, ಸ್ಪ್ರಿಂಕ್ಲರ್ ಸೆಟ್ ವಿತರಣೆಗೆ ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗದ ರೈತರಿಗೆ ನಿಗದಿ ಮಾಡಿರುವ 7 ವರ್ಷ ರದ್ದು ಪಡಿಸಬೇಕು. ಇದನ್ನು ಮೂರು ವರ್ಷಕ್ಕೆ ಇಳಿಸಬೇಕು.
ರೈತರಿಗೆ ಇರುವ ಜಮೀನು ಆಧರಿಸಿ ಸ್ಪ್ರಿಂಕ್ಲರ್ ಸೆಟ್ ಪ್ರಮಾಣ ಹೆಚ್ಚಳ ಮಾಡಬೇಕು. ಬೆಳೆ ವಿಮೆಗಳ ನಿಯಮ ಮತ್ತು ಮಾರ್ಗಸೂಚಿಗಳ ಬಗ್ಗೆ ರೈತರಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಬಿತ್ತನೆ ಬೀಜ ಮತ್ತು ಯೂರಿಯಾ ಗೊಬ್ಬರ ಕೊರತೆಯಾಗದಂತೆ ನಿಗಾವಹಿಸಬೇಕು. ಖಾಸಗಿ ಅಂಗಡಿಗಳಲ್ಲಿ ಗೊಬ್ಬರ ಕೊರತೆ ಎದುರಿಸುತ್ತಿದ್ದೇವೆ.
ಇಲಾಖೆ ವತಿಯಿಂದ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು. ಬಳಿಕ ಉಪ ಕೇಂದ್ರದ ಅಧಿಕಾರಿ ಪ್ರತಾಪ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮುಖಂಡರಾದ ಎಚ್.ಮಂಜುನಾಥ್, ಪ್ರಶಾಂತ್ ರೆಡ್ಡಿ, ಎಸ್.ಚಂದ್ರಶೇಖರ್, ಗಂಗಾಧರ, ಗುಂಡಾನಾಯ್ಕ, ಚಂದ್ರಪ್ಪ, ಪಾಪಯ್ಯ ಇತರರಿದ್ದರು.