

ಬೆಳಗಾವಿ: ಜಿಲ್ಲೆಗೆ ಕರೊನಾಘಾತ ಹೆಚ್ಚುತ್ತಲೇ ಇದೆ. ಭಾನುವಾರ ಒಂದೇ ದಿನಕ್ಕೆ ನಾಲ್ಕು ಕರೊನಾ ವೈರಸ್ ಪ್ರಕರಣಗಳು ಧೃಡಪಟ್ಟಿದ್ದು, ಪಾಸಿಟಿವ್ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಜಿಲ್ಲೆ, ಹೆಚ್ಚು ವೈರಸ್ ಪತ್ತೆಯಾದ ಪಟ್ಟಿಯಲ್ಲಿ ಐದರಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕುಂದಾನಗರಿಯ ಜನರಲ್ಲಿ ತಲ್ಲಣ, ಆತಂಕ ಹೆಚ್ಚಾಗುತ್ತಲಿದೆ.
ರಾಯಬಾಗ ತಾಲೂಕಿನ 19 ವರ್ಷದ ಯುವಕ (ಪಿ-223), 55 ವರ್ಷದ ವ್ಯಕ್ತಿ (ಪಿ-225) ಹಾಗೂ 25 ವರ್ಷದ ಯುವಕ (ಪಿ-226) ನಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂವರಿಗೆ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ಪಿ-150 ಜತೆ ಸಂಪರ್ಕಕ್ಕೆ ಬಂದಿದ್ದರು. ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 38 ವರ್ಷದ ವ್ಯಕ್ತಿ (ಪಿ-224)ಯಲ್ಲೂ ಸೋಂಕು ದೃಢಪಟ್ಟಿದ್ದು, ಇವರು ಪಿ-128 ಜತೆ ಸಂಪರ್ಕ ಹೊಂದಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಳಗಾವಿ ಜಿಲ್ಲೆಗೆ ‘ದೆಹಲಿ ನಂಜು’ ದಿನೇದಿನೆ ಹೆಚ್ಚಾಗುತ್ತಿದೆ. ಹಿರೇಬಾಗೇವಾಡಿಯ ಪಿ-128ನೇ ಸೋಂಕಿತನಿಂದ ಕುಟುಂಬದ ಮೂವರು ಸದಸ್ಯರಿಗೆ ವೈರಸ್ ದೃಢಪಟ್ಟಿದ್ದು, ತಂದೆ (ಪಿ-182), ತಾಯಿ ಮತ್ತು ಸಹೋದರನಿಗೂ ಸೋಂಕು ತಗುಲಿದೆ. ಜಿಲ್ಲಾಡಳಿತಕ್ಕೆ ಸವಾಲು: ಪಿ-182 ಈತನು ಈರುಳ್ಳಿ ವ್ಯಾಪಾರಸ್ಥನಾಗಿದ್ದರಿಂದ ಇವನ ಸಂಪರ್ಕದಲ್ಲಿರುವ ಜನರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ. ಈತನ ಸಂಪರ್ಕದಲ್ಲಿದ್ದ 15 ಜನರನ್ನು ಈಗಾಗಲೇ ಗುರುತಿಸಲಾಗಿದೆ. ಆದರೆ, ಈ ಹಿಂದೆ ಬೆಳಗಾವಿ, ಹಿರೇಬಾಗೇವಾಡಿ, ಅಂಕಲಗಿ, ಪಾರಿಶ್ವಾಡ, ಚಿಕ್ಕ ಹಟ್ಟಿಹೊಳಿ ಹಾಗೂ ಇತರ ಭಾಗದಲ್ಲಿ ಪಿ-182 ಸುತ್ತಾಡಿದ್ದಾನೆ. ಹೀಗಾಗಿ ಈ ಪ್ರದೇಶದಲ್ಲಿ ಯಾರ ಜತೆ ಸಂಪರ್ಕದಲ್ಲಿದ್ದಾನೆಂದು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.
ಪಕ್ಕದ ಮನೆಯವನಿಗೂ ಸೋಂಕು: ಪಿ-182 ಉಳ್ಳಾಗಡ್ಡಿ ವ್ಯಾಪಾರಸ್ಥರನಾಗಿದ್ದರಿಂದ ಈತನ ಬಳಿ ದಿನವೂ ನೂರಾರು ಸಂಖ್ಯೆಯಲ್ಲಿ ಜನರು ಖರೀದಿಗೆ ಬಂದಿರುತ್ತಾರೆ. ಜತೆಗೆ ಇತರ ವ್ಯಾಪಾರಸ್ಥರೂ ಸಹ ಒಡನಾಟ ಹೊಂದಿರುತ್ತಾರೆ. ಹೀಗಾಗಿ ಈತನು ಹಲವಾರು ಜನರ ಸಂಪರ್ಕ ಸಾಧಿಸಿರಬಹುದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಭಾನುವಾರ ಹೊಸದಾಗಿ ಪತ್ತೆಯಾದ ಪಿ-224 ಸೋಂಕಿತನು ಪಿ-182 ಮನೆಯ ಪಕ್ಕದಲ್ಲಿರುವುದರಿಂದಲೇ ಸೋಂಕು ತಗುಲಿದೆ.
ಜನರಿಗೆ ಜೀವಭಯ: ಪಿ-224ರ ಪ್ರಥಮ ಸಂಪರ್ಕದಲ್ಲಿರುವ ಜನರನ್ನು ಹಾಗೂ ಆತನ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ. ತಾಲೂಕಿನ ಹಿರೇಬಾಗೇವಾಡಿಯಲ್ಲಿ ಐದು ಕರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದರಿಂದ ಇಲ್ಲಿನ ಜನರು ಆಂತಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಪೊಲೀಸ್ ಇಲಾಖೆ ಸಲಹೆಯಂತೆ ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಎಲ್ಲರೂ ಪಾಲಿಸುತ್ತಿದ್ದಾರೆ.
ಪಿ-128ನೇ ವ್ಯಕ್ತಿಯು ಫೆ. 12ರಂದು ಬೆಳಗಾವಿಯಿಂದ ದೆಹಲಿಗೆ, ಅಲ್ಲಿಂದ ಖಾಸಗಿ ವಾಹನದಲ್ಲಿ ಉತ್ತರ ಪ್ರದೇಶದ ಚೇಕಡಾ ಗ್ರಾಮಕ್ಕೆ ಪ್ರಯಾಣ ಬೆಳೆಸಿ, 36 ದಿನಗಳ ಕಾಲ ಗ್ರಾಮದ ಬಿಲಾಲ್ ಮಸೀದಿಯಲ್ಲಿ ವಾಸವಿದ್ದನು. ಮಾರ್ಚ್ 21ರಂದು ಉತ್ತರ ಪ್ರದೇಶದಿಂದ ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ವಾಪಸಾಗಿದ್ದನು. ಮಾರ್ಚ್ 22ರಂದು ಬೆಳಗಾವಿಗೆ ಆಗಮಿಸಿ, ಟಾಟಾ ಏಸ್ ವಾಹನದ ಮೂಲಕ ಸ್ವಗ್ರಾಮಕ್ಕೆ ಬಂದಿದ್ದನು. ಅಲ್ಲದೆ, ಗ್ರಾಮದ ಮಸೀದಿಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿಯೂ ಭಾಗಿಯಾಗಿದ್ದನು. ಈತನ ಈ ಟ್ರಾವೆಲ್ ಹಿಸ್ಟರಿ ಜಿಲ್ಲಾಡಳಿತಕ್ಕೆ ತಲೆಬಿಸಿಯನ್ನುಂಟುಮಾಡಿದೆ.