

ಜಗದೀಶ ಹೊಂಬಳಿ ಬೆಳಗಾವಿ
ಪ್ರವಾಹ, ನೆರೆ, ಅಗ್ನಿ ಅವಘಡ, ಕಟ್ಟಡ ದುರಂತಗಳಂತಹ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮಾದರಿಯಲ್ಲೇ ರಾಜ್ಯದಲ್ಲಿ 2011ರಲ್ಲಿ ಜಾರಿಗೆ ತಂದಿರುವ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್)ಗೆ ಬೆಳಗಾವಿಯಲ್ಲಿ ಈವರೆಗೂ ಸ್ವಂತ ಕಟ್ಟಡ ಕಲ್ಪಿಸಿಲ್ಲ.
ಬೈಲಹೊಂಗಲ ತಾಲೂಕಿನ ಬೆಳವಡಿಯಲ್ಲಿ ಸುಮಾರು 49 ಎಕರೆ ಜಾಗ ಗುರುತಿಸಿ ಕೈಬಿಡಲಾಗಿದೆ ಹೊರತು ಈವರೆಗೂ ಎಸ್‌ಡಿಆರ್‌ಎಫ್‌ಗೆ ಸ್ವಂತ ಕಟ್ಟಡ ಭಾಗ್ಯ ದೊರೆತಿಲ್ಲ. ಅಂದಿನ ರಾಜ್ಯ ಸರ್ಕಾರ ಬೆಳಗಾವಿ ಎಸ್‌ಡಿಆರ್‌ಎಫ್‌ಗೆ 300 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದರು. ಈ ಪೈಕಿ ಕಟ್ಟಡ, ಸಿಬ್ಬಂದಿಗೆ ತರಬೇತಿ ನೀಡುವುದಕ್ಕೆ ಮೈದಾನ, ಎಲ್ಲ ಸಿಬ್ಬಂದಿಗೂ ತಂಗುವುದಕ್ಕೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಕಟ್ಟಡ ಕಟ್ಟುವ ಸೌಭಾಗ್ಯ ಒದಗಿ ಬಂದಿಲ್ಲ. ಹೀಗಾಗಿ ಗೋವಾವೇಸ್ ಬಳಿಯ ಅಗ್ನಿಶಾಮಕ ಠಾಣೆಯ ಆವರಣದಲ್ಲೇ ಎಸ್‌ಡಿಆರ್‌ಎಫ್‌ಗೆ ಎರಡು ಸಣ್ಣ ಕೊಠಡಿಗಳನ್ನೇ ಹಾಕಿಕೊಡಲಾಗಿದೆ. ಇವೇ ಕೊಠಡಿಗಲೇ ಎಸ್‌ಡಿಆರ್‌ಎಫ್ ಕಚೇರಿಗಳಾಗಿವೆ.
ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮಂಗಳೂರು, ಕಲಬುರಗಿ ಜಿಲ್ಲೆಗೆ ಏಕಕಾಲದಲ್ಲೇ ಎಸ್‌ಡಿಆರ್‌ಎಫ್ ಪಡೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಸುಸಜ್ಜಿತ ಕಚೇರಿ ಮಾಡಿಕೊಡಲಾಗಿದೆ. ಇನ್ನುಳಿದ ಜಿಲ್ಲೆಯಲ್ಲಿ ಸ್ವಂತ ಕಟ್ಟಡವಿಲ್ಲದಿದ್ದರೂ ಬಾಡಿಗೆ ಕಟ್ಟಡದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಬೆಳಗಾವಿ ದೊಡ್ಡ ಜಿಲ್ಲೆಗೆ ಎರಡು ಕೊಠಡಿಗಳನ್ನು ಮಾತ್ರ ನೀಡಿ ಸರ್ಕಾರ ಕೈ ತೊಳೆದುಕೊಂಡಿದೆ.
40 ಸಿಬ್ಬಂದಿ: ಬೆಳಗಾವಿಯ ಎಸ್‌ಡಿಆರ್‌ಎಫ್‌ಗೆ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಕಾರ್ಯ ವ್ಯಾಪ್ತಿ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಏನಾದರೂ ತುರ್ತು ಪರಿಸ್ಥಿತಿ ಎದುರಾದರೆ ಎಸ್‌ಡಿಆರ್‌ಎಫ್ ತಂಡವು ದೌಡಾಯಿಸಬೇಕು. ಹೀಗೆ ಬೇರೆ ಜಿಲ್ಲೆಯಲ್ಲಿರುವ ಎಸ್‌ಡಿಆರ್‌ಎಫ್ ತಂಡಕ್ಕೆ ಬೇರೆ ಬೇರೆ ಜಿಲ್ಲೆಗಳ ಕಾರ್ಯವ್ಯಾಪ್ತಿ ಹಂಚಿಕೆ ಮಾಡಲಾಗಿದೆ. ಎಸ್‌ಡಿಆರ್‌ಎಫ್‌ಗೆ ವಿವಿಧ ಇಲಾಖೆಗಳ ಒಟ್ಟು 127 ಸಿಬ್ಬಂದಿ ಕಲ್ಪಿಸಲಾಗಿತ್ತು. ಎಸ್‌ಡಿಆರ್‌ಎಫ್‌ಗೆ ಸೇರ್ಪಡೆಯಾಗುವ ವಿವಿಧ ಇಲಾಖೆಗಳ ಸಿಬ್ಬಂದಿಯು ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಗಿ, ಮತ್ತೆ ಹೊಸಬರು ಬರುತ್ತಾರೆ. ಬೆಳಗಾವಿ ಎಸ್‌ಡಿಆರ್‌ಎಫ್‌ಗೆ 127 ಸಿಬ್ಬಂದಿ ಮಂಜೂರಿದ್ದರೂ ಕೇವಲ 40ರಿಂದ 45 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿ ಬೆಳಗಾವಿ ಎಸ್‌ಡಿಆರ್‌ಎಫ್‌ಗೆ ಸೇರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಪಾಳಿ ಪ್ರಕಾರ ವಾಸ: ಬೆಳಗಾವಿ ಗೋವಾವೇಸ್ ಬಳಿ ಇರುವ ಅಗ್ನಿಶಾಮಕ ಠಾಣೆ ಆವರಣದಲ್ಲಿ ಎಸ್‌ಡಿಆರ್‌ಎಫ್ ಸಿಬ್ಬಂದಿಗೆ ತಾತ್ಕಾಲಿಕವಾಗಿ ನೀಡಿರುವ ಎರಡು ಸಣ್ಣ ಕೊಠಡಿಗಳಲ್ಲಿ ಸೌಲಭ್ಯಗಳಿಲ್ಲ. ಕನಿಷ್ಠ ಸೌಲಭ್ಯದಲ್ಲೇ ಸಿಬ್ಬಂದಿ ಪಾಳಿ ಪ್ರಕಾರ ವಾಸ ಮಾಡುತ್ತಿದೆ. ವಿಪತ್ತು ನಿರ್ವಹಣೆ ಪರಿಕರಗಳನ್ನು ಆವರಣದ ಅಲ್ಲಲ್ಲಿ ಇಡಲಾಗಿದೆ. ಬೆಳಗಾವಿ ದೊಡ್ಡ ಜಿಲ್ಲೆ ಪ್ರವಾಹದಂತಹ ಪರಿಸ್ಥಿತಿಗಳು ಮೇಲಿಂದ ಮೇಲೆ ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಎಸ್‌ಡಿಆರ್‌ಎಫ್‌ಗೆ ಯೋಜನೆಯ ಮೂಲ ಆಶಯದಂತೆ ಪ್ರತ್ಯೇಕ ಕಟ್ಟಡ, ಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಎಸ್‌ಡಿಆರ್‌ಎಫ್‌ಗೆ ಕಟ್ಟಡ ನಿರ್ಮಿಸುವುದಕ್ಕೆ ಬೆಳಗಾವಿಯಿಂದ 20 ಕಿಮೀ ಸುತ್ತಲಿನ ಪ್ರದೇಶದಲ್ಲಿ ಜಾಗ ಗುರುತಿಸುವಂತೆ ತಹಸೀಲ್ದಾರ್ ಅವರಿಗೆ ಆದೇಶಿಸಿದ್ದೇವೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಜಾಗ ಅಂತಿಮಗೊಳಿಸುತ್ತೇವೆ. ಬಳಿಕ ಕಟ್ಟಡ ನಿರ್ಮಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ವಿಜಯಕುಮಾರ್ ಹೊನಕೇರಿ, ಅಪರ ಜಿಲ್ಲಾಧಿಕಾರಿ ಬೆಳಗಾವಿ