22ರಂದು ಬೆಳಗಾವಿಯಲ್ಲಿ ವಕೀಲರ ರಾಜ್ಯ ಸಮಾವೇಶ

2
Published on


ಮೈಸೂರು:
ಪಂಚಮಸಾಲಿ 2-ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಸೆ.22 ರಂದು ವಕೀಲರ ಪ್ರಥಮ ರಾಜ್ಯ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು.
ನಗರದ ಹೊಸಮಠದಲ್ಲಿ ಶನಿವಾರ ವಕೀಲರ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಧರಣಿ ಮಾಡುತ್ತೇವೆ. ಅಂದು ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಸಮುದಾಯದ ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ವಕೀಲರ ಮೂಲಕ ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗಿದೆ. ಅದರ ಭಾಗವಾಗಿ ಮೈಸೂರಿನಲ್ಲಿ ವಕೀಲರ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗುತ್ತದೆ. ನಮ್ಮ ಸಮಾಜದ ಜನರ ನ್ಯಾಯಯುತ ಹಕ್ಕಾಗಿರುವ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ವಕೀಲರ ಸಂಘಟನೆ ಕೂಡ ಮಾಡಲಾಗಿದೆ. ಈಗ ರಾಜ್ಯವ್ಯಾಪಿ ಸಮಾಜದ ವಕೀಲರ ಸಂಘಟನೆ ಮಾಡಲಾಗಿದೆ. ಈಗಾಗಲೇ ನಾವೆಲ್ಲರೂ ಹೋರಾಟ ಮಾಡಿದರೂ ಸದನದಲ್ಲಿ ಶಾಸಕರು ಮಾತನಾಡಲಿಲ್ಲ. ಅದಕ್ಕಾಗಿ ವಕೀಲರ ಸಂಘಟನೆ ಮಾಡಿ ಆ ಮೂಲಕ ಒತ್ತಡ ತರಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಸೆ.17 ರಂದು ಕಲಬುರಗಿ ಭಾಗದ ಸಮುದಾಯದ ಮುಖಂಡರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ. ಯಾರೇ ಸಿಎಂ ಆಗಲಿ, ಯಾವುದೇ ಸರ್ಕಾರ ಬರಲಿ ಮೀಸಲಾತಿ ನೀಡುವವರೆಗೂ ನಮ್ಮ ಹೋರಾಟ ನಿರಂತರ ಎಂದರು.
ಈಗಲೂ ಸರ್ಕಾರ ನಮ್ಮನ್ನು ಕರೆದು ಮೀಸಲಾತಿ ಸಂಬಂಧ ಚರ್ಚೆ ನಡೆಸದೆ ಇದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಡಿಸೆಂಬರ್‌ನಲ್ಲಿ ನಡೆಯುವ ಅಧಿವೇಶನ ಸಾವಿರಾರು ಸಂಖ್ಯೆಯಲ್ಲಿ ಸೇರಿ ಹೋರಾಟ ಮಾಡುತ್ತೇವೆ. ಸರ್ಕಾರ ನಮ್ಮ ಜತೆ ಮಾತನಾಡುವ ಸೌಜನ್ಯ ತೋರಿಸಬೇಕು ಎಂದರು.

ಸರ್ಕಾರದಿಂದ ಬೆಲೆ ಸಿಕ್ಕಿಲ್ಲ:

ರಾಜಕೀಯವಾಗಿಯೂ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ರಾಜಕೀಯ ಅನ್ಯಾಯವನ್ನು ನಾವು ಸಹಿಸುತ್ತೇವೆ. ನಾವು ಬೆಳೆದ ಬೆಳೆ ನಷ್ಟವಾದರೂ ಸಹಿಸುತ್ತೇವೆ. ಆದರೆ, ನಮ್ಮ ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೇಳುತ್ತಿರುವ ಮೀಸಲಾತಿ ಕೊಡದಿದ್ದರೆ ನಾವು ಎಂದೂ ಸಹಿಸಲ್ಲ. ನಮ್ಮ ಸಮುದಾಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೀಸಲಾತಿ ಬೇಕು. ಈ ಸಂಬಂಧ ನಾವು ಮೂರೂವರೆ ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಇಬ್ಬರು ಮುಖ್ಯಮಂತ್ರಿಗಳು, ಸರ್ಕಾರ ಬದಲಾಗಿದೆ. ಆದರೂ ನಮ್ಮ ಹೋರಾಟಕ್ಕೆ ಸರ್ಕಾರದಿಂದ ಬೆಲೆ ಸಿಕ್ಕಿಲ್ಲ ಎಂದು ದೂರಿದರು.
ಬೆಳಗಾವಿಯಲ್ಲಿ ವಕೀಲರ ಸಮಾವೇಶದ ಮೂಲಕ ಬೃಹತ್ ಹೋರಾಟ ರೂಪಿಸಲಾಗುವುದು. ಕಾನೂನಾತ್ಮಕವಾಗಿ ಯಾವ ರೀತಿಯ ಹೋರಾಟ ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಲು 10 ಜನ ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಆ ಮೇಲೆ ಮುಖ್ಯಮಂತ್ರಿ ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಅಧಿವೇಶನದಲ್ಲಿ ಪಂಚಮಸಾಲಿ 2-ಎ ಮೀಸಲಾತಿ ಬಗ್ಗೆ ಮಾತನಾಡುವಂತೆ ನಮ್ಮ ಸಮುದಾಯದ ಎಲ್ಲ ಶಾಸಕರಿಗೆ ತಿಳಿಸಿದ್ದೆ. ಆದರೆ, ಯಾರೂ ಮಾತನಾಡಿಲ್ಲ. ಕೇಳಿದರೆ ವಿಧಾನಸಭಾ ಅಧ್ಯಕ್ಷರು ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ನಮ್ಮ ಸಮಾಜದ ಶಾಸಕರು ಸಭಾತ್ಯಾಗ ಮಾಡಬೇಕಿತ್ತು. ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸಮಾಜದ ವಕೀಲರು ಶ್ರೀಗಳನ್ನು ಅಭಿನಂದಿಸಿದರು. ಲಿಂಗಾಯತ ಗೌಡ ಮಹಾಸಭಾದ ಅಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಕಣೇನೂರು ಜಗದೀಶ್, ಎಸ್.ಪಿ.ಮಂಜುನಾಥ್, ಬಸವರಾಜಪ್ಪ, ಬಿ.ಬಿ.ಜೀವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net