

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಅಂದಾಜು 30 ಸಾವಿರ ಕೋಟಿ ರೂ. ಕಾಮಗಾರಿ ಬಿಲ್ಗಳಿಗೆ ಹಣ ಪಾವತಿ ಸೇರಿದಂತೆ ಹಲವು ಸಮಸ್ಯೆಗಳನ್ನೂ ಈಡೇರಿಸುವಂತೆ ವಾರದ ಗಡುವು ಕೊಟ್ಟಿರುವ ರಾಜ್ಯ ಗುತ್ತಿಗೆದಾರರ ಸಂಘ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ 7 ಸಚಿವರಿಗೆ ಪತ್ರ ಬರೆದಿದೆ.
ಜಲಸಂಪನ್ಮೂಲ ಇಲಾಖೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಚಿವ ಪ್ರಿಯಾಂಕ ರ್ಖಗೆ, ವಸತಿ ಸಚಿವ ಜಮೀರ್ ಅಹ್ಮದ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಪೌರಾಡಳಿತ ಖಾತೆ ಸಚಿವ ರಹೀಂಖಾನ್ ಅವರಿಗೆ ಜ.9ರಂದು ಸಂಘ ಪತ್ರ ಬರೆದಿದೆ.
ಲೋಕೋಪಯೋಗಿ, ನೀರಾವರಿ, ಪೌರಾಡಳಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ, ಮಹಾನಗರ ಪಾಲಿಕೆಯಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ರೂ.ಬಿಲ್ಗಳಿಗೆ ಹಲವು ವರ್ಷಗಳಿಂದ ಹಣ ಪಾವತಿಯಾಗದೆ ಎಲ್ಲ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾನಸಿಕ ಒತ್ತಡದಿಂದಾಗಿ ಕೆಲ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜ್ಯೇಷ್ಠತೆ ಆಧಾರದ ಮೇರೆಗೆ ಅನುದಾನ ಬಿಡುಗಡೆ ಮಾಡಬೇಕು. ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ಮತ್ತು ಬಾಕಿ ಬಿಲ್ಗಳ ಪಾವತಿಗೆ ಸಂಬಂಧಿಸಿದಂತೆ ಹಲವು ಬಾರಿ ಗಮನಕ್ಕೆ ತಂದರೂ ತಾವು ಒಂದು ಪತ್ರವನ್ನೂ ಬರೆದಿಲ್ಲ. ಆದ್ದರಿಂದ, ಪತ್ರ ತಲುಪಿದ 7 ದಿನದೊಳಗೆ ತಮ್ಮ ಸಮ್ಮುಖದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆದು ನ್ಯಾಯ ಒದಗಿಸಬೇಕೆಂದು ಸಂಘದ ಅಧ್ಯಕ್ಷ (ಪ್ರಭಾರ) ಜಗನ್ನಾಥ್ ಬಿ.ಶೇಗಜಿ, ಸಚಿವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.