ರಾಜಕೀಯ ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ

1358 Joshi new 1259
Published on

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಜನಕಲ್ಯಾಣಕ್ಕೆ ಮುಂದಾಗದೆ ರಾಜಕೀಯ ನಾಟಕದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರು ಜನಕಲ್ಯಾಣ, ಜನರ ಹಿತ, ಅಭಿವೃದ್ಧಿಗೆ ಬದ್ಧತೆ ತೋರದೆ ತಮ್ಮ ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ಹರಿ ಹಾಯ್ದರು.

ಜನರು ತಮ್ಮ ಕಲ್ಯಾಣಕ್ಕಾಗಿ ಕಾಂಗ್ರೆಸ್​ಗೆ 136 ಸೀಟುಗಳನ್ನು ಕೊಟ್ಟು ಗೆಲ್ಲಿಸಿದರು. ಆದರೆ, ಅಧಿಕಾರದಲ್ಲಿ ತಾವು ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ? ಎಂಬ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜೋಶಿ ಸಲಹೆ ನೀಡಿದರು.

ರಾಜ್ಯದಲ್ಲಿ ಮಳೆ ಹಾನಿ, ಬೆಳೆ ಹಾನಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್ ಅನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ತ್ವರಿತ ಅನುಮತಿ ನೀಡಿದರೂ ರಾಜ್ಯದಲ್ಲಿ ಸೂಕ್ತ ತಯಾರಿ ಮಾಡಿಕೊಂಡಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದ ಅಧಿಕಾರಿಗಳು ಫೋನ್ ಕರೆ ಮಾಡಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ಕೋರಿದ್ದರು. ಪ್ರಸ್ತಾವನೆ ಸಲ್ಲಿಸಲು ಸಲಹೆ ಮಾಡಿದ್ದೆ. ಆದರಂತೆ ರಾಜ್ಯದಿಂದ ಪ್ರಸ್ತಾವನೆ ಬಂದ ಎರಡೇ ದಿನದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿದ್ದಾಗಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಹೆಸರು, ಸೂರ್ಯಕಾಂತಿ, ಉದ್ದು, ಸೋಯಾಬಿನ್​ಗೆ ಕಡಿಮೆ ಬೆಲೆ ಇದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರ ಸರ್ಕಾರದೊಂದಿಗೆ ರ್ಚಚಿಸಿ, ತಕ್ಷಣವೇ ಖರೀದಿ ಕೇಂದ್ರ ತೆರೆಯುವಂತೆ ಅನುಮತಿ ಕೊಡಿಸಲಾಗಿದೆ ಎಂದರು.

ಯಾವುದೇ ರಾಜ್ಯಗಳಲ್ಲಿ ಯಾವುದೇ ಸರ್ಕಾರ ಇರಲಿ ಕೇಂದ್ರ ತಾರತಮ್ಯ ತೋರುವುದಿಲ್ಲ. ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತ್ವರಿತ ಅನುಮತಿ ನೀಡಿರುವುದೇ ಇದಕ್ಕೆ ನಿದರ್ಶನ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.

ರಾಜ್ಯದಲ್ಲಿ ರಸ್ತೆಗಳೆಲ್ಲ ಹದಗೆಟ್ಟು ಹೋಗಿವೆ. ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ. ಕನಿಷ್ಠ ರಸ್ತೆಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ ಎಂದು ಆರೋಪಿಸಿದರು.

ಎನ್​ಡಿಎ ಸರ್ಕಾರ ಇರುವೆಡೆ ರಾಹುಲ್ ಗಾಂಧಿ ಓಡೋಡಿ ಹೋಗುತ್ತಾರೆ. ಆದರೆ, ತಮ್ಮದೇ ಸರ್ಕಾರ ಇರುವ ಕರ್ನಾಟಕಕ್ಕೆ ಬಂದು ನೋಡಲಿ. ಆಡಳಿತ ಅಭಿವೃದ್ಧಿ ಏನಾಗಿದೆ ಎಂಬುದನ್ನು ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net