

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಕಿವಿ, ಮೂಗು, ಗಂಟಲು ತಜ್ಞ ವೈದ್ಯರ ಸಂಘದಿಂದ ಆಯೋಜಿಸಿರುವ ರಾಜ್ಯಮಟ್ಟದ 42ನೇ ಸಮ್ಮೇಳನದಲ್ಲಿ ಇ.ಎನ್.ಟಿ ವಿಭಾಗದ ತಂತ್ರಜ್ಞಾನದ ಶಸ್ತ್ರಚಿಕಿತ್ಸೆ ಅನಾವರಣಗೊಂಡಿದೆ.
ಇ.ಎನ್.ಟಿ ವಿಭಾಗಕ್ಕೆ ಸಂಬಂಧಿಸಿದ ಆಧುನಿಕತೆಯ ಶಸ್ತ್ರಚಿಕಿತ್ಸೆ, ಹಿಂದಿನ ಹಾಗೂ ಇಂದಿನ ಪದ್ಧತಿಯಲ್ಲಿನ ಬದಲಾವಣೆ, ಸ್ನಾತಕೊತ್ತರ ವೈದ್ಯ ವಿದ್ಯಾರ್ಥಿಗಳೊಂದಿಗೆ ಸಂವಾದ, ರಸಪ್ರಶ್ನೆ, ಚರ್ಚೆ, ಆಹ್ವಾನಿತ ಮಾತುಕತೆ ನಡೆಯುತ್ತಿದೆ.
ಮೊದಲ ದಿನದ ಸಮ್ಮೇಳನವನ್ನು ಉದ್ಘಾಟಿಸಿದ ಖ್ಯಾತ ಇ.ಎನ್.ಟಿ ತಜ್ಞ ವೈದ್ಯ ಡಾ.ಎಚ್.ವಿಜಯೇಂದ್ರ ಹಲವು ಮಹತ್ವದ ವಿಷಯವನ್ನು ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ತಿಳಿಸಿದರು. ಇ.ಎನ್.ಟಿ ವಿಭಾಗಕ್ಕೆ ಸಂಬಂಧಿಸಿದಂತೆ ಹಿಂದೆ ನಡೆಯುತ್ತಿದ್ದ ಶಸ್ತ್ರಚಿಕಿತ್ಸೆಗೂ ಪ್ರಸ್ತುತ ಸಾಕಷ್ಟು ಬದಲಾವಣೆ ಕಂಡಿದೆ. ಭಾರತ ಇ.ಎನ್.ಟಿ ಶಸ್ತ್ರಚಿಕಿತ್ಸೆಯಲ್ಲಿ ಮುಂದಿದೆ. ಈ ಕಾರಣದಿಂದಲೇ ವಿದೇಶದಿಂದ ಜನರು ಭಾರತಕ್ಕೆ ಆಗಮಿಸಿ ಶಸ್ತ್ರಚಿಕಿತ್ಸೆಗೊಳಪಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.
ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಪ್ರಾಂಶುಪಾಲ ಡಾ.ಎಂ.ಹನುಮಂತ್‌ಪ್ರಸಾದ್, ತಜ್ಞ ವೈದ್ಯರಾದ ಡಾ.ರಾಮಲಿಂಗೇಗೌಡ, ಡಾ.ಎಂ.ಬಿ.ಭಾರತಿ, ಡಾ.ಸುನೀಲ್‌ನಾರಾಯಣ್ ದತ್, ಡಾ.ಪಿ.ಲಕ್ಷ್ಮೀ, ಡಾ.ಡಿ.ರವಿ, ಡಾ.ಅನಿಲ್‌ಕುಮಾರ್, ಡಾ.ಎಂ.ಪಿ.ಪ್ರಕಾಶ್, ಡಾ.ಡಿ.ಆರ್.ಚಿದಾನಂದ್, ಡಾ.ಪಿ.ವಿಜಯ್, ಡಾ.ಎನ್.ಕೆ.ಬಾಲಾಜಿ ಇತರರಿದ್ದರು.
ಕಿವಿ, ಮೂಗಿನಿಂದಲೇ ಶಸ್ತ್ರಚಿಕಿತ್ಸೆ ಕಿವಿ, ಮೂಗಿನಿಂದಲೇ ಶಸ್ತ್ರಚಿಕಿತ್ಸೆ ನಡೆಸುವ ಕುರಿತಂತೆ ಸಮ್ಮೇಳನದಲ್ಲಿ ಪ್ರಾಯೋಗಿಕವಾಗಿ ಪ್ರದರ್ಶನ ನೀಡಲಾಯಿತು. ಮಿದುಳಿನ ಸಮಸ್ಯೆಗೆ ಮೊದಲಿನಂತೆ ಶಸ್ತ್ರಚಿಕಿತ್ಸೆ ಬದಲಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ಕಿವಿ, ಮೂಗಿನಿಂದಲೇ ಶಸ್ತ್ರಚಿಕಿತ್ಸೆ ಮಾಡಬಹುದಾದ ವಿಧಾನದ ಬಗ್ಗೆ ಪ್ರಾತ್ಯಕ್ಷಿತೆ ಕೊಡಲಾಯಿತು. ಮಾತ್ರವಲ್ಲದೆ ಇಂತಹ ಶಸ್ತ್ರಚಿಕಿತ್ಸೆಯಿಂದಾಗುವ ಅನುಕೂಲದ ಬಗ್ಗೆಯೂ ಮಾಹಿತಿ ನೀಡಲಾಯಿತು. ಅತ್ಯುತ್ತಮರಿಗೆ ಚಿನ್ನದ ಪದಕ ಮೂರು ದಿನದ ಸಮ್ಮೇಳನದ ಅಂಗವಾಗಿ ಇ.ಎನ್.ಟಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯನ್ನು ತಜ್ಞ ವೈದ್ಯರು ನೀಡಲಿದ್ದಾರೆ. ಮಾತ್ರವಲ್ಲದೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತದೆ. ಜತೆಗೆ ಇ.ಎನ್.ಟಿ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಪ್ರೆಸೆಂಟೆಷನ್ ನೀಡುವ ವಿದ್ಯಾರ್ಥಿಗಳಿಗೆ ಅಂತಿಮ ದಿನ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ.