

ಮುದ್ದೇಬಿಹಾಳ: ತಾಲೂಕಿನ ಡೊಂಕಮಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಅವಧಿ ಮುಗಿದ ಆಹಾರ ಸೇವಿಸಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಅಸ್ವಸ್ಥರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಮುದ್ದೇಬಿಹಾಳ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆಯ ಪದಾಧಿಕಾರಿಗಳು ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರನ್ನು ಭೇಟಿ ಮಾಡಿ ತಪ್ಪಿತಸ್ಥರ ವಿರುದ್ಧ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ಕೇಂದ್ರದ ಕಾರ್ಯಕರ್ತೆ ತಪ್ಪಿತಸ್ತೆಯಾಗಿದ್ದಾರೆ. ಮೇ ತಿಂಗಳಲ್ಲಿ ರೇಷನ್ ಬಂದಿದ್ದರೂ ಹಂಚಿರಲಿಲ್ಲ. 3 ತಿಂಗಳ ನಂತರ ಅವಧಿ ಮುಗಿದ ಮೇಲೆ ವಿತರಿಸಿದ್ದರಿಂದಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದನ್ನು ಪರಿಶೀಲಿಸಲು ಆ.27 ರಂದು ಸಿಡಿಪಿಒ ಶಿವಮೂರ್ತಿ ಕುಂಬಾರ, ಮೇಲ್ವಿಚಾರಕಿ ಶಾರದಾ ಪೂಜಾರಿ ಅವರು ಭೇಟಿ ನೀಡಿ ವಾಸ್ತವ ಅರಿತು ಕಾರ್ಯಕರ್ತೆಯನ್ನು ಅಮಾನತ್ತುಗೊಳಿಸುವುದಾಗಿ ಹೇಳಿದ್ದರು.
ಇಲಾಖೆಯ ಡಿಡಿ ಕೆ.ಕೆ.ಚವ್ಹಾಣ ಅವರೂ ಕ್ರಮದ ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕ್ರಮ ಕೈಗೊಳ್ಳಲು ನಿರ್ಲಕ್ಷೃ ತೋರಿರುವ ಎಲ್ಲರ ಮೇಲೂ ಕ್ರಮಕ್ಕೆ ಶಿಾರಸು ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸ್ವೀಕರಿಸಿ, ಮನವಿಯಲ್ಲಿನ ಅಂಶಗಳನ್ನು ಓದಿ, ಪದಾಧಿಕಾರಿಗಳಿಂದ ಮೌಖಿಕ ಮಾಹಿತಿ ಪಡೆದ ನಾಗಲಕ್ಷ್ಮೀ ಅವರು ಅಲ್ಲಿಂದಲೇ ಮುಖ್ಯಮಂತ್ರಿ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿ ಡಾ.ವೈಷ್ಣವಿ ಸುಧೀರ ಅವರಿಗೆ ಕರೆಮಾಡಿ, ವಿಷಯ ತಿಳಿಸಿ ಮುಖ್ಯಮಂತ್ರಿ ಕಚೇರಿಯಿಂದಲೇ ವಿಜಯಪುರ ಜಿಪಂ ಸಿಇಒ ಸೇರಿ ಸಂಬಂಧಿಸಿದವರಿಗೆ ನೋಟಿಸ್ ಜಾರಿಗೊಳಿಸುವಂತೆ ತಿಳಿಸಿದರು.
ಯುವ ಘರ್ಜನೆಯ ಅಧ್ಯಕ್ಷ ಮುತ್ತು ಟಕ್ಕಳಕಿ, ಉಪಾಧ್ಯಕ್ಷ ಅನೀಲ ವಾಲಿಕಾರ, ಪದಾಧಿಕಾರಿಗಳಾದ ಪ್ರಕಾಶಗೌಡ ಪಾಟೀಲ, ದ್ಯಾಮಣ್ಣ ಚವನಭಾವಿ, ಹುಲಗೇಶ ಮಾದರ ಇತರರಿದ್ದರು.