

ಬೆಂಗಳೂರು: ಉದ್ಯಾನನಗರಿಯಲ್ಲಿ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗಳು, ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆ ಸೇರಿ ನೂರಾರು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹೊಸಕೆರೆಹಳ್ಳಿ ಬಳಿಯ ಗುರುದತ್ತ ಲೇಔಟ್ ಬಳಿಯ ರಾಜಕಾಲುವೆ ಗೋಡೆ ಕುಸಿತ, ವಿವಿಧೆಡೆ ಮರಗಳು ಬಿದ್ದ ಬಗ್ಗೆ ವರದಿಯಾಗಿದೆ.
ಎರಡು ದಿನಗಳಿಂದ ತಡರಾತ್ರಿ ಸುರಿಯುತ್ತಿರುವ ಮಳೆಯಿಂದಾಗಿ ನಿವಾಸಿಗಳು ಅಕ್ಷರಶಃ ನಲುಗಿಹೋಗಿದ್ದಾರೆ. ಮಂಗಳವಾರ ಸಂಜೆ 6.30ರಿಂದ ಆರಂಭವಾದ ಮಳೆ, ಬುಧವಾರ ಬೆಳಗಿನ ಜಾವದವರೆಗೂ ಸುರಿಯಿತು. 30ಕ್ಕೂ ಹೆಚ್ಚು ವಾರ್ಡ್ಗಳಲ್ಲಿ 75 ಮಿ.ಮೀ.ನಿಂದ 128 ಮಿ.ಮೀ. ಸುರಿದಿದೆ. ತಗ್ಗು ಪ್ರದೇಶದ ಮನೆಗಳು, ಬಡಾವಣೆಗಳು, ರಸ್ತೆಗಳು, ಅಂಡರ್ಪಾಸ್ಗಳು ಜಲಾವೃತಗೊಂಡಿದ್ದವು.
ಕೋರಮಂಗಲ, ಕೆಂಗೇರಿ, ಆರ್.ಆರ್. ನಗರ, ಎಚ್.ಎಸ್.ಆರ್. ಲೇಔಟ್, ಮಲ್ಲತ್ತಹಳ್ಳಿ ಮುಂತಾದೆಡೆ ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಯಿತು. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು, ಫ್ರಿಜ್, ವಾಷಿಂಗ್ ಮಷಿನ್, ಟಿವಿ, ದಿನಸಿ ಸೇರಿ ಬಹುತೇಕ ವಸ್ತುಗಳು ನೀರುಪಾಲಾಗಿವೆ. ಮನೆ ಮುಂದಿನ ನೀರಿನ ಸಂಪ್ಗಳಲ್ಲಿ ಕೊಳಚೆ ನೀರು ತುಂಬಿ ಕೊಂಡಿತ್ತು. ಆರ್.ಆರ್. ನಗರದ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಮದುವೆಗೆ ತಂದಿದ್ದ ವಸ್ತು ಹಾನಿಗೀಡಾಗಿವೆ.
ಕೋರಮಂಗಲ, ಆರ್.ಆರ್. ನಗರ, ಕಾಪಿಕಟ್ಟೆ ಹೋಟೆಲ್ ಬಳಿ ಕೆಲವು ಅಪಾರ್ಟ್ವೆುಂಟ್ಗಳ ತಳ ಮಹಡಿಗೆ ಮಳೆ ನೀರು ನುಗ್ಗಿದ್ದರಿಂದ ಕಾರು, ಬೈಕ್ಗಳು ಸೇರಿ ನೂರಾರು ವಾಹನಗಳು ನೀರಲ್ಲಿ ಮುಳುಗಿದ್ದವು. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಯಂತ್ರಗಳ ನೆರವಿನಿಂದ ನೀರು ಖಾಲಿ ಮಾಡಿದ್ದಾರೆ. ವಾಹನಗಳು ಸದ್ಯಕ್ಕೆ ಬಳಕೆ ಮಾಡಲು ಆಗದಂತಾಗಿವೆ.
ಮಂಗಳವಾರ ರಾತ್ರಿ 8.30ರಿಂದ ಬುಧವಾರ ಬೆಳಗ್ಗೆ 5.30 ಅವಧಿಯಲ್ಲಿ ಸರಾಸರಿ 66.8 ಮಿ.ಮೀ. ಮಳೆಯಾಗಿದೆ. ಇದರಲ್ಲಿ ಕೆಂಗೇರಿಯಲ್ಲಿ 124.5 ಮಿಮೀ, ಆರ್.ಆರ್.ನಗರ 123.5, ಲಕ್ಕಸಂದ್ರ 115, ವಿ.ವಿ.ಪುರ 108.5, ಗೊಟ್ಟಿಗೆರೆ 101, ವಿದ್ಯಾಪೀಠ 99, ನಾಗರಬಾವಿ 98, ಗಾಳಿ ಆಂಜನೇಯ ದೇವಾಲಯ 96.5, ಪಟ್ಟಾಭಿರಾಮನಗರ 92.5, ಮಾರುತಿ ಮಂದಿರ 92, ಬೇಗೂರು 90, ಜ್ಞಾನಭಾರತಿ ಕ್ಯಾಂಪಸ್ 88.5, ಬಸವನಗುಡಿ 86.5, ಚಾಮರಾಜಪೇಟೆ 86, ಉತ್ತರಹಳ್ಳಿ 79, ಸಂಪಂಗಿರಾಮನಗರ 77, ಕೋಣನಕುಂಟೆ ಹಾಗೂ ಕೋರಮಂಗಲದಲ್ಲಿ ತಲಾ 75 ಮಿಲಿ ಮೀಟರ್ ಮಳೆ ಸುರಿದಿದೆ.
ತೀವ್ರ ಮಳೆಯಿಂದಾಗಿ ರಸ್ತೆಗಳು, ಅಂಡರ್ಪಾಸ್ಗಳಲ್ಲಿ ನೀರು ನಿಂತಿದ್ದರಿಂದ ಬುಧವಾರ ಬೆಳಗ್ಗೆ ಕಚೇರಿಗಳು ಹಾಗೂ ವಿವಿಧ ಕಾರ್ಯಗಳಿಗೆ ಹೊರಟ ವಾಹನ ಸವಾರರಿಗೆ ಟ್ರಾಫಿಕ್ಜಾಮ್ ಉಂಟಾಗಿತ್ತು. ಶೇಷಾದ್ರಿ ರಸ್ತೆ, ಕೋರಮಂಗಲ ರಸ್ತೆ, ಬಳ್ಳಾರಿ ರಸ್ತೆ, ಮೆಜೆಸ್ಟಿಕ್, ಆನಂದರಾವ್ ವೃತ್ತ, ಮೈಸೂರು ರಸ್ತೆ, ಕೆಂಗೇರಿ ಮತ್ತಿತರೆಡೆ ವಾಹನದಟ್ಟಣೆ ಉಂಟಾಗಿತ್ತು. ಜೆ.ಪಿ. ನಗರ, ಗಿರಿನಗರದಲ್ಲಿ ತಲಾ ಒಂದು ಮರಗಳು ಬಿದ್ದಿವೆ. ಬಸವನಗುಡಿ, ಚಾಮರಾಜಪೇಟೆ, ವಿಜಯನಗರದಲ್ಲಿ ಮರದ ಕೊಂಬೆಗಳು ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಹೊಸಕೆರೆಹಳ್ಳಿಯ ಗುರುದತ್ತ ಲೇಔಟ್ನ ಅಪಾರ್ಟ್ವೆುಂಟ್ಗಳ ಬಳಿ ಹಾದುಹೋಗಿರುವ ರಾಜಕಾಲುವೆ ತಡೆಗೋಡೆ ಕುಸಿದಿದೆ. ಪರಿಣಾಮ, ರಾಜಕಾಲುವೆ ಪಕ್ಕದಲ್ಲಿ ಬಫರ್ ವಲಯ ಬಿಡದೆ ನಿರ್ವಿುಸಿದ ಬೃಹತ್ ಕಟ್ಟಡಗಳು ಹಾನಿಯಾಗುವ ಸಾಧ್ಯತೆಯಿದೆ. ಬಿಬಿಎಂಪಿ ಕೂಡಲೇ ಮಳೆಗೆ ಮಣ್ಣು ಕೊಚ್ಚಿಹೋಗದಂತೆ ಟರ್ಪಾಲ್ನಿಂದ ಮುಚ್ಚಲಾಗಿದೆ. ಮರಳಿನ ಚೀಲ ಹಾಕಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ, ಸ್ಮಾರ್ಟ್ ಸಿಟಿ ಕಾಮಗಾರಿ, ಒಎಫ್ಸಿ ಅಳವಡಿಕೆ, ಪಾಲಿಕೆ ರಸ್ತೆ ಕಾಮಗಾರಿಯ ಸ್ಥಳದಲ್ಲಿ ನೀರು ನಿಂತಿದ್ದರಿಂದ ಕೆಲಸ ಸ್ಥಗಿತಗೊಂಡಿವೆ.