ಮೂರು ಸುಗ್ರೀವಾಜ್ಞೆಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ: ಸಿಎಂ, ಮಂತ್ರಿಗಳು, ಶಾಸಕರ ಶೇ. 30ರಷ್ಟು ಸಂಬಳ, ಭತ್ಯೆ ಕರೊನಾ ನಿಧಿಗೆ

Vidhana Soudha vvani
Published on

ಬೆಂಗಳೂರು: ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ2011ಕ್ಕೆ ತಿದ್ದುಪಡಿ, ಶಾಸಕರು ಮತ್ತು ಸಚಿವರ ವೇತನ ಕಡಿತ ಸೇರಿದಂತೆ ಮೂರು ಸುಗ್ರೀವಾಜ್ಞೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ಕ್ಕೆ ತಿದ್ದುಪಡಿ ತರುವ ಮೂಲಕ 94(ಎ) ಅಡಿ ಭೂ ಒತ್ತುವರಿದಾರರು ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸದೇ ಇರಲು ಅಧ್ಯಾದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಒಂದು ವರ್ಷದ ಸಂಬಳ ಮತ್ತು ಭತ್ಯೆಯ ಶೇ. 30ರಷ್ಟನ್ನು ಕೋವಿಡ್ ನಿಧಿಗೆ ನೀಡುವ ಕುರಿತು ಸುಗ್ರೀವಾಜ್ಞೆ ತರಲು ಸಂಪುಟ ಸಮ್ಮತಿ ನೀಡಿದೆ.

ಜಿಎಸ್‌ಟಿ ಪಾವತಿ ಅವಧಿಯನ್ನು ಮೂರು ತಿಂಗಳು(ಜೂ.30)ಮುಂದಕ್ಕೆ ಹಾಕುವ ಸಂಬಂಧದ ಸುಗ್ರಿವಾಜ್ಞೆಗೂ ಸಂಪುಟ ಅನುಮೋದನೆ ನೀಡಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಭೂ ಕಬಳಿಕೆ ನಿಷೇಧ ಅಧಿನಿಯಮದಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡ ಗ್ರಾಮೀಣ ಪ್ರದೇಶದ ಅದರಲ್ಲೂ ಶಿವಮೊಗ್ಗ ಮತ್ತು ಮಡಿಕೇರಿ ಜಿಲ್ಲೆಗಳ ಭಾಗದ ರೈತರಿಗೆ ಸಾಕಷ್ಟು ತೊಂದರೆಯಾಗಿತ್ತು. ಇದನ್ನು ತಪ್ಪಿಸಲು ಸಂಬಂಧಿಸಿದ ಕಾಯ್ದೆಯ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತರಲು ಸಂಪುಟ ಸಭೆ ಸಮ್ಮತಿಸಿದೆ. ಇದರಿಂದ 94(ಎ) ಅಡಿ ಸಲ್ಲಿಕೆಯಾಗಿರುವ ಅರ್ಜಿಗಳು ಇತ್ಯರ್ಥವಾಗುವ ವರೆಗೆ ರೈತರಿಗೆ ಯಾವುದೇ ರೀತಿ ಕಾನೂನು ಕ್ರಮ ಜರುಗಿಸಲಾಗುವುದಿಲ್ಲ ಎಂದರು.

ಅಲ್ಲದೆ, ಕರ್ನಾಟಕ ಭೂ ಕಬಳಕೆ ನಿಷೇಧ ಅಧಿನಿಯಮದಡಿ ದಾಖಲಿಸಲಾಗುವ ಮೊಕದ್ದಮೆಗಳ ವಿಚಾರಣೆ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿರುವ ನ್ಯಾಯಾಲಯದಲ್ಲಿ ನಡೆಯಬೇಕಿತ್ತು. ಇದರಿಂದ ರೈತರಿಗೆ ತೊಂದರೆಯಾಗಿತ್ತು. ಈ ಪ್ರಕರಣಗಳನ್ನು ಸಿವಿಲ್ ಕೋರ್ಟ್‌ಗೆ ವರ್ಗಾಯಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಸಿವಿಲ್ ಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್‌ಗೂ ಅಪೀಲು ಹೋಗಬಹುದಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ವೇತನ ಹಾಗೂ ಭತ್ಯೆಯ ಶೇ.30 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಉಳಿತಾಯವಾಗುವ 15, 36, 93,576 ರೂ. ಗಳನ್ನು ಕೋವಿಡ್-19 ನಿಧಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ಪೂರೈಕೆಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪಟ್ಟಣ ಪಂಚಾಯಿತಿಗಳಿಗೆ ಈಗಾಗಲೇ 25 ಲಕ್ಷ ರೂ. ಬಿಡುಗಡೆ ಮಾಡಿದ್ದು, ಇನ್ನೂ 25 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ತೊಂದರೆಯಾದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕೃಷಿ ಸಚಿವರು ಹಗಲು ರಾತ್ರಿ ಶ್ರಮಿಸಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಆಲಿಕಲ್ಲು ಮಳೆ ಬಿದ್ದು, ಭತ್ತದ ಬೆಳೆ ನಷ್ಟವಾಗಿರುವ ಮಾಹಿತಿ ಇದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ರೈತರಿಗೆ ನೆರವಾಗುವುದಾಗಿ ಭರವಸೆ ನೀಡಿದರು.

ಯಾರೂ ಹಸಿವಿನಿಂದ ಬಳಲದಂತೆ ಎಚ್ಚರ ವಹಿಸಲಾಗಿದೆ. ಕೂಲಿ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಚನ್ನಪಟ್ಟಣ, ರಾಮನಗರ ಭಾಗದ ರೈತರು ಬೆಂಗಳೂರಿಗೆ ಮಾವು ಸಾಗಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಮುಖ ತೀರ್ಮಾನಗಳು:

-ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿ ಮತ್ತು ಕೃಷಿ ಇಲಾಖೆಗಳಿಂದ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಪರಿಹಾರ ನೀಡಲು ಆಲೋಚನೆ ಮಾಡುವುದು.

-ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯದಿರುವ 2 ರಿಂದ 2.50 ಲಕ್ಷ ಜನರಿದ್ದು, ಅವರಿಗೂ 2 ತಿಂಗಳ ಉಚಿತ ಪಡಿತರ ನೀಡಲು ನಿರ್ಧರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net