ರಾಜ್ಯ ಬಜೆಟ್​: ಆರ್ಥಿಕ ಸಮೀಕ್ಷೆ

Vidhana Soudha
Published on

ರಾಜ್ಯ ಬಜೆಟ್​ ಅನ್ನು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಗುರುವಾರ ಮಂಡಿಸಿದರು. ಆರ್ಥಿಕ ಸಂಕಷ್ಟದ ನಡುವೆಯೂ ಸಾಕಷ್ಟು ಯೋಜನೆಗಳೊಂದಿಗೆ ಸಮತೋಲನ ಕಾಯ್ದುಕೊಂಡಿರುವುದು ಬಜೆಟ್​ ವಿಶೇಷವಾಗಿದೆ. ಹೀಗಾಗಿ ರಾಜ್ಯದ ಆರ್ಥಿಕ ಸಮೀಕ್ಷೆಯ ಹೇಗಿದೆ ಎಂದು ನೋಡುವುದಾದರೆ...

ಉದ್ಯೋಗ ಸೃಷ್ಟಿಯ ಗುಟ್ಟು

2018-19ನೇ ಸಾಲಿನಲ್ಲಿ 69278 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳು 1,4876.98 ಕೋಟಿ ರೂ. ಬಂಡವಾಳ ಕುರಿತು ರಾಜ್ಯದಲ್ಲಿ ನೋಂದಣಿಯಾಗಿವೆ. ಇದರಿಂದ 5,82,943 ಜನರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗಿದ್ದು, 2017-18ನೇ ಸಾಲಿಗೆ ಹೋಲಿಸಿದರೆ 2018-19ನೇ ಸಾಲಿನಲ್ಲಿ ನೋಂದಣಿಯಾದ ಘಟಕಗಳು ಶೇ.42.89 ಹೆಚ್ಚಾಗಿವೆ. ಬಂಡವಾಳ ಹೂಡಿಕೆ ಶೇ.28.41 ಹಾಗೂ ಉದ್ಯೋಗಾವಕಾಶ ಶೇ.32.34 ಏರಿಕೆಯಾಗಿದೆ.

ನಿರುದ್ಯೋಗ ದರ ಎಷ್ಟಿದೆ?

ರಾಜ್ಯದ ನಿರುದ್ಯೋಗ ದರ ಶೇ.4.8 ಇದ್ದು, ಇದು ಭಾರತದ ನಿರುದ್ಯೋಗ ದರ ಶೇ.6.0ಕ್ಕಿಂತ ಕಡಿಮೆ ಇದೆ. ಹೋಲಿಕೆ ಮಾಡಬಹುದಾದ ರಾಜ್ಯಗಳಲ್ಲಿ ಅತಿಕಡಿಮೆ ನಿರುದ್ಯೋಗ ದರ ಆಂಧ್ರಪ್ರದೇಶದಲ್ಲಿ (ಶೇ.4.5) ಕಂಡುಬಂದಿದ್ದು, ಅತಿ ಹೆಚ್ಚಿನ ದರವು ಕೇರಳದಲ್ಲಿ (ಶೇ.11.4) ಇದೆ. ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಪುರುಷರ ನಿರುದ್ಯೋಗ ದರ ಶೇ.4.0 ಇದ್ದು, ಮಹಿಳೆಯರಲ್ಲಿ ಶೇ.3.4ರಷ್ಟಿದೆ.

ರಾಜ್ಯದ ದೂರವಾಣಿ ಸಾಂದ್ರತೆ 109.10

ರಾಜ್ಯದ ಒಟ್ಟು ದೂರವಾಣಿ ಸಾಂದ್ರತೆಯು (ಅಂದರೆ 100 ಜನರು ಹೊಂದಿರುವ ದೂರವಾಣಿ ಸಂಪರ್ಕಗಳ ಸಂಖ್ಯೆ) 109.10 ಆಗಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ 90.11 ಹೆಚ್ಚಾಗಿದೆ. ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ದೂರವಾಣಿ ಸಾಂದ್ರತೆಯಲ್ಲಿ ವ್ಯಾಪಕ ಅಂತರವಿದೆ. 2019ರ ಜೂನ್ ಅಂತ್ಯದವರೆಗೆ ಗ್ರಾಮೀಣ ದೂರವಾಣಿ ಸಾಂದ್ರತೆ 61.69 ಆಗಿದ್ದು, ನಗರ ದೂರವಾಣಿ ಸಾಂದ್ರತೆಯು 181.71 ಆಗಿದೆ. ಸ್ಥಿರ ದೂರವಾಣಿ ಸಂಪರ್ಕಗಳಲ್ಲಿ ಗಮನಾರ್ಹ ಇಳಿಮುಖವಾಗಿದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಅಂಚೆ ಕಚೇರಿ ಸಂಖ್ಯೆ ಇಳಿಮುಖವಾಗಿದೆ.

ಉದ್ಯೋಗಾಕಾಂಕ್ಷಿಗಳ ಸಂಖ್ಯೆಯಲ್ಲಿ ಏರಿಕೆ

ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗಕ್ಕಾಗಿ ನೋಂದಾಯಿಸಿ ದವರ ಸಂಖ್ಯೆ 2019ರ ನವೆಂಬರ್​ನಲ್ಲಿ 3.46 ಲಕ್ಷ ಇದೆ. 2019ರ ಮಾರ್ಚ್​ಗೆ ಇದ್ದ 3.43 ಲಕ್ಷಕ್ಕೆ ಹೋಲಿಸಿದರೆ ಶೇ.07 ಏರಿಕೆಯಾಗಿರುವುದು ಕಂಡುಬರುತ್ತದೆ. ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.5.8, ಪದವಿ ಶಿಕ್ಷಣ ಪಡೆದವರ ದಾಖಲಾತಿ ಪ್ರಮಾಣ ಶೇ.1.8 ಏರಿಕೆಯಾಗಿದೆ.

ಕುಸಿದ ಆಂತರಿಕ ಉತ್ಪನ್ನ ದರ

ರಾಜ್ಯ ಆಂತರಿಕ ಉತ್ಪನ್ನ ಬೆಳವಣಿಗೆ ದರ ಕುಸಿದಿರುವುದು ಕಂಡು ಬಂದಿದೆ. 2016-17ರಲ್ಲಿ ಶೇ.13.3 ಇದ್ದ ದರ, 2017-18ರಲ್ಲಿ ಶೇ.10.8, 2018-19ರಲ್ಲಿ ಶೇ.7.8 ತಲುಪಿ 2019-20ರಲ್ಲಿ ಶೇ.6.8ಕ್ಕೆ ಮುಟ್ಟಿದೆ. ರಾಜ್ಯಾದಾಯ ಮತ್ತು ತಲಾದಾಯ ಹೋಲಿಕೆ ಮಾಡಿದಾಗ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ.

ವಿದ್ಯುತ್ ಸರ್​ಪ್ಲಸ್

ಕೇಂದ್ರ ಸರ್ಕಾರದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ರಾಜ್ಯದ ಪಾಲನ್ನು ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು ವಿದ್ಯುತ್ ಸ್ಥಾಪಿತ ಸಾಮರ್ಥ್ಯವು 2019ರ ನವೆಂಬರ್​ವರೆಗೆ 29,884.50 ಮೆಗಾವಾಟ್ ಆಗಿದೆ. ಕಳೆದ ವರ್ಷಕ್ಕಿಂತ ಶೇ. 11.33 ಈಗ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net