ರಾಜ್ಯಬಜೆಟ್ ಅಭಿವೃದ್ಧಿ ಶೂನ್ಯ, ಜನದ್ರೋಹಿ

17 ckm 5 narendra
ನರೇಂದ್ರ
Published on

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯಬಜೆಟ್ ಅಭಿವೃದ್ಧಿ ಶೂನ್ಯ ಜನದ್ರೋಹಿಯಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಡಾ.ಎ.ನರೇಂದ್ರ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ 15ನೇ ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರೂ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಆಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಅಭಿವೃದ್ಧಿಗಿಂತ ರಾಜಕೀಯ ಮಾಡುವ ಮೂಲಕ ಬಜೆಟ್‌ನ ಪಾವಿತ್ರತೆ ಹಾಳು ಮಾಡಿದ್ದಾರೆ. ಬಜೆಟ್ ಅಭಿವೃದ್ಧಿ ಶೂನ್ಯವಾಗಿದ್ದರಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರವನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
3,71,383 ಕೋಟಿ ಗಾತ್ರದ ಬಜೆಟ್‌ನಲ್ಲಿ 1ಲಕ್ಷ ಕೋಟಿ ರೂ. ಸಾಲದ ಹೊರೆ ಆಗುತ್ತದೆ. ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸದೆ ರಾಜ್ಯಸರ್ಕಾರಕ್ಕೆ ಬರುವಂತ ವರಮಾನದ ಮೂಲ ತಿಳಿಸದಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲ ತರಹದ ತೆರಿಗೆಳನ್ನು ಹೆಚ್ಚು ಮಾಡುವ ಲಕ್ಷಣಗಳು ಕಾಣುತ್ತಿವೆ ದೂರಿದರು.
ಈ ಬಜೆಟ್‌ನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿಲ್ಲ. ಚಾಲ್ತಿಯಲ್ಲಿರುವ ಯೋಜನೆಗಳಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಮಾನವ ವನ್ಯಪ್ರಾಣಿ ಸಂಘರ್ಷ, ಒತ್ತುವರಿ ಸಮಸ್ಯೆ ಸೇರಿದಂತೆ ಯಾವುದೇ ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿಲ್ಲ. ಜಿಲ್ಲೆಯ 5 ಜನ ಶಾಸಕರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಮತ್ತು ಆಸಕ್ತಿ ಇಲ್ಲದಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಫಿಯನ್ನು ಬ್ರಾಂಡಿಂಗ್ ಮಾಡುವ ಬಗ್ಗೆ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ, ಪ್ರತ್ಯೇಕ ಹಾಲು ಒಕ್ಕೂಟ, ಪ್ರವಾಸೋದ್ಯಮ ಸೇರಿದಂತೆ ಯಾವುದೇ ಅಭಿವೃದ್ಧಿಗೆ ಕಾಳಜಿ ವಹಿಸದೆ ಒಟ್ಟಾರೆ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ದ್ರೋಹ ಮಾಡಿದೆ. ಇದಕ್ಕೆ ಜಿಲ್ಲೆಯಿಂದ ಆಯ್ಕೆಯಾದ ಕಾಂಗ್ರೆಸ್‌ನ ಐವರು ಶಾಸಕರ ನಿರ್ಲಕ್ಷೃವೇ ಕಾರಣ ಎಂದು ದೂರಿದರು.
ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್, ಬಿಜೆಪಿ ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಪುಷ್ಪರಾಜ್, ಸಚಿನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net