ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್: ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ಟೀಕಾಪ್ರಹಾರ

Laxmi ashwin gowda
Published on

ಮಂಡ್ಯ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಹಗರಣ ಮಾಡುತ್ತಾ ಭ್ರಷ್ಟಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರ, ಒಂದು ತಪ್ಪನ್ನು ಮುಚ್ಚಿಹಾಕಲು ಮತ್ತೊಂದು ವಿಷಯ ತೆಗೆದುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದೆ. ಇದನ್ನು ಪ್ರಶ್ನಿಸುವವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವುದರ ಜತೆಗೆ ಪೊಲೀಸ್ ಕೇಸ್ ಹಾಕಿಸುವ ಮೂಲಕ ಯಾರೂ ಪ್ರಶ್ನೆ ಮಾಡದಂತೆ ಘೋಷಿತ ತುರ್ತು ಪರಿಸ್ಥಿತಿ ಹೇರುತ್ತಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್‌ಗೌಡ ದೂರಿದರು.

1975ರ ಜೂ.25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಯಾವುದೇ ಕಾರಣವಿಲ್ಲದೆ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ತಂದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷಭೇದ ಮಾಡದೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಸುಭದ್ರ ಭಾರತ ಕಟ್ಟುತ್ತಿದ್ದಾರೆ. ಇಡೀ ಪ್ರಪಂಚದಲ್ಲೇ ಭಾರತವು ಆರ್ಥಿಕವಾಗಿ 4ನೇ ಸ್ಥಾನದಲ್ಲಿದೆ. ಇದನ್ನು ಸಹಿಸಿಕೊಳ್ಳದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವೃಥಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮಾತೆತ್ತಿದರೆ ಬಿಜೆಪಿಯವರು ಸಂವಿಧಾನ ವಿರೋಧಿ ಎಂದು ಆರೋಪ ಮಾಡುತ್ತಾರೆ. ಸಂವಿಧಾನ ವಿರುದ್ಧವಾಗಿ ಯಾವ ತಪ್ಪು ಮಾಡಿದ್ದಾರೆ ಎನ್ನುವುದನ್ನು ಸಾಬೀತುಪಡಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಸರಿಯಿಲ್ಲ ಎಂಬ ಉದಾಹರಣೆಯಾಗಿ ನೂರಾರು ಕೋಟಿ ರೂ. ವಾಲ್ಮೀಕಿ ಹಗರಣ ನಡೆಸಿದ್ದಾರೆ. ಇದನ್ನು ಹೈಕೋರ್ಟ್ ಸಿಬಿಐ ತನಿಖೆ ವಹಿಸಿದ್ದು, ಈ ಮೂಲಕ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ಅಲ್ಲದೆ ವಸತಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷೀಯ ಶಾಸಕರಾದ ಬಿ.ಆರ್.ಪಾಟೀಲ್ ಅವರೇ ಮಾತನಾಡಿದ್ದಾರೆ. ಅಲ್ಲದೆ ವರಿಷ್ಠರಿಗೂ ದೂರು ನೀಡಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕಿಂತಲೂ ಭ್ರಷ್ಟಾಚಾರದ ಉದಾಹರಣೆಗಳು ಬೇಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ರಾಜ್ಯಸರ್ಕಾರ ನಡೆಸಲು ಉದ್ದೇಶಿಸಿರುವ ಕಾವೇರಿ ಆರತಿಗೆ ಬಿಜೆಪಿಯಿಂದ ಯಾವುದೇ ವಿರೋಧವಿಲ್ಲ. ಆದರೆ, ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆಗೆ ಧಕ್ಕೆಯಾಗದಂತೆ ಮಾಡಲಿ. ಒಂದು ವೇಳೆ ಕಾವೇರಿ ಆರತಿ ಕಾಮಗಾರಿಗಳಿಂದ ತೊಂದರೆಯಾದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಕಾವೇರಿ ಆರತಿಗೆ 92 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ದೊಡ್ಡ ದುರಂತ. ಈ ಹಣದಲ್ಲಿ 10 ರಿಂದ 20 ಕೋಟಿ ರೂ ಖರ್ಚು ಮಾಡಿ ಉಳಿದ ಹಣವನ್ನು ಲೂಟಿ ಹೊಡೆಯುವ ತಂತ್ರವಾಗಿದೆ. ರಾಜ್ಯ ಸರ್ಕಾರ ನಮಗೆ ಅನುಮತಿ ನೀಡಿದರೆ ಬಿಜೆಪಿ ವತಿಯಿಂದಲೇ ಯಾವುದೇ ಶುಲ್ಕವನ್ನು ಜನರಿಗೆ ವಿಧಿಸಿದೆ ಉಚಿತವಾಗಿ ‘ಕಾವೇರಿ ಆರತಿ’ಯನ್ನು ಮಾಡಲಾಗುವುದು ಎಂದರು.

ರೈತರ ಜಮೀನನ್ನು ವಶಪಡಿಸಿಕೊಂಡು, ಪರಿಸರಕ್ಕೆ ಧಕ್ಕೆಯಾಗುವಂತೆ ಕೆ.ಆರ್.ಎಸ್.ನಲ್ಲಿ ಸಾವಿರಾರು ಕೋಟಿ ರೂ ವೆಚ್ಚದಲ್ಲಿ ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಬಿಜೆಪಿ ವಿರೋಧವಿದೆ. ಕೆ.ಆರ್.ಎಸ್. ಅಣೆಕಟ್ಟೆಯು ಒಂದೇ ಶಿಲೆಯ ಪದರದ ಮೇಲೆ ನಿರ್ಮಾಣವಾಗಿದ್ದು, ಅಮ್ಯೂಸ್‌ಮೆಂಟ್ ಪಾರ್ಕ್ ಆದರೆ ಅಣೆಕಟ್ಟೆಗೆ ಧಕ್ಕೆಯಾಗಲಿದೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಾಗಾನಂದ, ಮನೋಜ್, ಪ್ರಸನ್ನ, ಮಂಗಳಾ ನವೀನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net