

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸದ್ಯವೇ ಕೈಗೂಡುವ ಸಾಧ್ಯತೆಗಳಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ವ್ಯಕ್ತಪಡಿಸಿದ ಇಂಗಿತ ವಿವಿಧ ವದಂತಿಗಳಿಗೆ ಕಾರಣವಾಗಿದೆ.
ನಿಗಮ-ಮಂಡಳಿಗಳಿಗೆ ದಿಢೀರ್ ನೇಮಕದಂತೆಯೇ ಎಂಟಿಬಿ ನಾಗರಾಜ್, ಆರ್. ಶಂಕರ್ ಮತ್ತು ಮುನಿರತ್ನ ಅವರನ್ನು ಸೇರಿಸಿಕೊಂಡು ಸಚಿವ ಸಂಪುಟ ವಿಸ್ತರಿಸಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾರ್ಯಕ್ರಮ ವೊಂದರಲ್ಲಿ ಬುಧವಾರ ಪಾಲ್ಗೊಂಡಿದ್ದ ಬಿಎಸ್ವೈ, ಇನ್ನೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಿಸುವ ಸ್ಪಷ್ಟ ಇಂಗಿತ ಹೊರ ಹಾಕಿದ್ದಾರೆ. ಹೀಗಾಗಿ ಆಡಳಿತಾರೂಢ ಬಿಜೆಪಿಯಲ್ಲಿ ಅನೂಹ್ಯ ಬೆಳವಣಿಗೆಯಾಗಿದೆ.
ರಾಜ್ಯ ರಾಜಕೀಯದಲ್ಲಿ ಚುರುಕಿನ ಚಟುವಟಿಕೆಗಳು ಗರಿಗೆದರಿ ತರಹೇವಾರಿ ಪುಕಾರು ಎದ್ದು, ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡ ತೊಡಗಿವೆ.
ಸ್ಪಷ್ಟ ಸಂದೇಶ: ಮೂವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡ ಸಂದೇಶವನ್ನು ವರಿಷ್ಠರು ಹಾಗೂ ನಂಬಿ ಬಂದವರಿಗೆ ರವಾನಿಸುವುದು ಬಿಎಸ್ವೈ ಚಿಂತನೆಯಾಗಿದೆ ಎಂದು ಮೂಲಗಳು ಹೇಳಿವೆ.
ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಬಿಎಸ್ವೈ ಸಚಿವ ಸಂಪುಟ ವಿಸ್ತರಿಸುವ ಉತ್ಸುಕತೆ ವ್ಯಕ್ತಪಡಿಸಿದ್ದರು. ಅದೇ ಹುರುಪಿನೊಂದಿಗೆ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ವಿಸ್ತರಣೆ ಅಥವಾ ಪುನರ್ ರಚನೆ ಸೂತ್ರದೊಂದಿಗೆ ಪಟ್ಟಿಯನ್ನೂ ಸಲ್ಲಿಸಿದ್ದರು. ಹಿಂದಿನಂತೆಯೇ ನಡ್ಡಾ ನಂತರ ತಿಳಿಸುವುದಾಗಿ ಹೇಳಿ ಬರಿಗೈಲಿ ವಾಪಸ್ ಕಳುಹಿಸಿದ್ದರು. 3 ತಿಂಗಳ ಅವಧಿಯಲ್ಲಿ 2 ಬಾರಿ ವರಿಷ್ಠರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ.
ಏತನ್ಮಧ್ಯೆ ಸಂಪುಟ ವಿಳಂಬದಿಂದಾಗಿ ಬಿಜೆಪಿ ನಾಯಕರಲ್ಲಿ ಮತ್ತೊಂದು ಸುತ್ತಿನ ಅಸಮಾಧಾನ, ಮುಸುಕಿನ ಗುದ್ದಾಟ ಆರಂಭವಾಗಿದೆ. ಕಾಂಗ್ರೆಸ್, ಜೆಡಿಎಸ್ನಿಂದ ಬಿಜೆಪಿ ಬಂದು ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಶಾಸಕರು ಈಗ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬೆನ್ನಲ್ಲೇ ಮೂಲ ಹಾಗೂ ‘ವಲಸಿಗರ’ ಗುಂಪಿನ ನಡುವೆ ವಾಕ್ಸಮರವೂ ಹೆಚ್ಚುತ್ತಿದೆ.