

ರಾಯಚೂರು: ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೆ ಈವರೆಗೆ ಬಳಕೆ ಮಾಡಿದ ಅನುದಾನದ ಬಗ್ಗೆ ಬಿಜೆಪಿ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸವಾಲು ಹಾಕಿದರು.
ಈ ಮೂಲಕ ಆರ್ಥಿಕವಾಗಿ ದಿವಾಳಿ ಆಗಿಲ್ಲ ಎಂದು ಸಾರ್ವಜನಿಕರಿಗಾದರೂ ತಿಳಿಸಲಿ ಎಂದು ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಯೋಜನೆ ಫಲನುಭವಿಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಅವ್ಯವಾಹಾರದ ನೆಪ ಹೇಳಿ 6 ತಿಂಗಳಿಂದ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ಇದನ್ನು ನೋಡಿದರೆ ಈ ಸರ್ಕಾರ ಆರ್ಥಿಕವಾಗಿ ದಿವಾಳಿ ಹಂತಕ್ಕೆ ತಲುಪಿದೆ ಎನ್ನುವುದರಲ್ಲಿ ಅನುಮಾನ ಇಲ್ಲ. ತಪ್ಪು ಮಾಡಿದ್ದರೆ ತನಿಖೆಯಲ್ಲಿ ಬಯಲು ಮಾಡಿ ಶಿಕ್ಷೆ ಕೊಡಿಸಬೇಕು. ಕಾಲಹರಣ ಮಾಡುವುದು ಯಾಕೆ. ಹಣ ಇಲ್ಲದ ಕಾರಣ ಕುಂಟು ನೆಪ ಹೇಳಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದರು.
ಬಿಜೆಪಿಯ ಕೆಲ ಸಚಿವರು, ನಾಯಕರು ಕೋಮು ಸೌಹಾರ್ದ ಕದಡುವ ಹೇಳಿಕೆ ನೀಡುತ್ತಿದ್ದಾರೆ. ಅಸಂವಿಧಾನಿಕ ಕಾಯ್ದೆ ರೂಪಿಸಿ ಜಾತಿ ಜಾತಿ ಮಧ್ಯೆ ಜಗಳ ತರುತ್ತಿದ್ದಾರೆ. ವಿದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಅನುಕೂಲ ಮಾಡಿಕೊಡಲು ನಮ್ಮ ವಿರೋಧವಿಲ್ಲ. ಆದರೆ, ದೇಶದಲ್ಲಿನ ಜನರನ್ನು ಧರ್ಮದ ಮೇಲೆ ವಿಭಜಿಸುವ ಕಾಯ್ದೆಗೆ ವಿರೋಧಿಸುತ್ತೇವೆ. ಇಂತಹ ಕಾಯ್ದೆಗಳು ಪ್ರಜಾಪ್ರಭತ್ವಕ್ಕೆ ಮಾರಕ ಎಂದರು. ಎಂಎಲ್ಸಿ ಎನ್.ಎಸ್.ಬೋಸರಾಜು, ಪಕ್ಷದ ನಗರಾಧ್ಯಕ್ಷ ಬಸವರಾಜರಡ್ಡಿ, ಮುಖಂಡರಾದ ಯಂಕಣ್ಣ ಯಾದವ್, ಜಯಣ್ಣ, ತಾಯಣ್ಣ ನಾಯಕ ಇತರರಿದ್ದರು.