

ಬೆಳಗಾವಿ: ಜಿಲ್ಲೆಯಲ್ಲಿ 2020-21ನೇ ಸಾಲಿನ ಹಿಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಅನುಷ್ಠಾನ’ದ ಜಿಲ್ಲಾಮಟ್ಟದ ಉಸ್ತುವಾರಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಪ್ರಸಕ್ತ ಸಾಲಿನಿಂದ ಈ ಯೋಜನೆಯು ಐಚ್ಛಿಕವಾಗಿದೆ ಎಂದರು.
ಬೆಳೆ ಸಾಲ ಪಡೆದ ರೈತರಿಗೆ ಸದರಿ ಯೋಜನೆಯಿಂದ ಹೊರಗುಳಿಯುವ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದಿದ್ದಲ್ಲಿ, ಈ ಕುರಿತು ಸಂಬಂಧಿಸಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಲಿಖಿತ ಅರ್ಜಿ ನೀಡಬೇಕು. ಬಳಿಕ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು ಎಂದರು.
ಮುಚ್ಚಳಿಕೆ ಪತ್ರ: ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮುಚ್ಚಳಿಕೆ ಪತ್ರ ನೀಡಬೇಕಾಗುತ್ತದೆ. ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಿ ಬೆಳೆ ವಿಮೆ ನೋಂದಣಿ ಮಾಡುಬಹುದು. ಮಾಹಿತಿಗಾಗಿ ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ಪ್ರತಿನಿಧಿಗಳನ್ನು (ಮೊ.ಸಂ.9449976218 ಹಾಗೂ 9008593066) ಸಂಪರ್ಕಿಸಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪ್ರಸಕ್ತ ಹಂಗಾಮಿನಲ್ಲಿ ರೈತರು ಈ ಬೆಳೆ ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು ಹುರುಳಿ (ಮಳೆ ಆಶ್ರಿತ) ಬೆಳೆಗೆ ನ.17, ಮುಸುಕಿನ ಜೋಳ (ನೀರಾವರಿ) ಮತ್ತು ಗೋಧಿ (ನೀರಾವರಿ) ಬೆಳೆಗಳಿಗೆ ಡಿ.16, ಉಳಿದ ಎಲ್ಲ ಅಧಿಸೂಚಿತ ಬೆಳೆಗಳಿಗೆ ನ. 30 ಕೊನೆಯ ದಿನ. ಮಾಹಿತಿಗಾಗಿ (8105412415 ಹಾಗೂ 9152007779) ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ವಿಮಾ ಸಂಸ್ಥೆ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ಎಚ್.ಡಿ. ಕೋಳೆಕರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟೆ ಇತರರಿದ್ದರು.