ಛಾಯಾಗ್ರಹಣಕ್ಕೆ ರಾಜ್ಯಪ್ರಶಸ್ತಿ ಪಡೆದ ಭುವನೇಶ್​ ಪ್ರಭು

udp-4-bhuvanesh prabhu
Published on

ಉಡುಪಿ: ಕನ್ನಡ ಚಿತ್ರರಂಗದಲ್ಲಿ ಕರಾವಳಿ ಮೂಲದ ಪ್ರತಿಭೆಗಳ ಸಾಲಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದ್ದು, ಉಡುಪಿ ಆತ್ರಾಡಿ ಮೂಲದ ಸಿನೆಮಾಟೋಗ್ರಾಫರ್​ ಭುವನೇಶ್​ ಪ್ರಭು ಹಿರೇಬೆಟ್ಟು 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿರುವ ಭುವನೇಶ್​, 2020ರಲ್ಲಿ ಚಿತ್ರೀಕರಣಗೊಂಡ ಆಮ್ಚೆ ಸಂಸಾರ್​ ಕೊಂಕಣಿ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಛಾಯಾಗ್ರಾಹಕರಾಗಿದ್ದರು. ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕರ್ವಾಲು, ಕೆಮ್ಮಣ್ಣು, ಅಲೆವೂರು ಸೇರಿದಂತೆ ಉಡುಪಿ ಸುತ್ತಮುತ್ತಲಿನ ಭಾಗದಲ್ಲಿ 40 ದಿನ ಶೂಟಿಂಗ್​ ನಡೆದಿದೆ. 2021ರಲ್ಲಿ ಸಿನೆಮಾ ಬಿಡುಗಡೆಯಾಗಿದ್ದು, ಉತ್ತಮ ಕೌಟುಂಬಿಕ ಚಿತ್ರವೆಂದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. 2 ಗಂಟೆ 10 ನಿಮಿಷ ಅವಧಿಯ ಚಿತ್ರವು ಹಿರಿಯರ ಕುರಿತಾದ ಕಥಾವಸ್ತುವನ್ನು ಹೊಂದಿದೆ. ಆರ್​ಎಸ್​ಬಿ ಭಾಷಿಕರು ಹೆಚ್ಚಾಗಿರುವ ಮುಂಬೈ, ಗೋವಾ, ಬೆಳಗಾವಿ, ದಕ್ಷಿಣ ಕನ್ನಡ, ಬೆಂಗಳೂರು, ಪುಣೆ ಸೇರಿದಂತೆ ಹಲವೆಡೆ ಚಿತ್ರ ಬಿಡುಗಡೆಗೊಂಡಿತ್ತು. ಈ ಚಲನಚಿತ್ರ ಕೊಲ್ಕತ್ತಾ ಅಂತಾರಾಷ್ಟ್ರೀಯ ಫಿಲ್ಮ ೆಸ್ಟಿವಲ್​ನಲ್ಲಿ ಪ್ರದರ್ಶನಗೊಂಡಿದೆ.

ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ

ಮಣಿಪಾಲ ಸಾರಸ್ವತ ಸೌಹಾರ್ದ ಸಹಕಾರಿ ಸಂದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಭುವನೇಶ್​ ಅವರಿಗೆ ಛಾಯಾಗ್ರಹಣ ಇಷ್ಟದ ಹವ್ಯಾಸ. ಕಳೆದ 15 ವರ್ಷಗಳಲ್ಲಿ 70ಕ್ಕೂ ಅಧಿಕ ಕನ್ನಡ, ತುಳು, ಬ್ಯಾರಿ ಭಾಷೆಯ ಕಿರುಚಿತ್ರ, ಅಲ್ಬಂ ಹಾಡುಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net