ನಾಡ ಪೆದ ಆಶಾ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯ ಗರಿ

nadapeda asha
Published on

ಮಡಿಕೇರಿ: ೨೦೨೧ನೇ ಸಾಲಿನ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕೊಡವ ಭಾಷೆಯ ನಾಡ ಪೆದ ಆಶಾ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಲಭಿಸಿದೆ.

ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ವಿಕೆ೩ ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ನಾಡ ಪೆದ ಆಶಾವನ್ನು ನಿರ್ಮಿಸಿದ್ದು, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿದ್ದಾರೆ.

ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಗ್ರಾಮೀಣ ಸೊಗಡನ್ನು ಸುಂದರವಾಗಿ ಬಿಂಬಿಸಲಾಗಿದೆ. ಕೊಡವ ಸಂಸ್ಕೃತಿ, ಉಡುಗೆ ತೊಡುಗೆ, ಸಂಪ್ರದಾಯ, ಆಚಾರ ವಿಚಾರಗಳನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ. ಯುದ್ಧದಲ್ಲಿ ವೀರ ಯೋಧ ಪತಿಯನ್ನು ಕಳೆದುಕೊಳ್ಳುವ ಅಂಗನವಾಡಿ ಕಾರ್ಯಕರ್ತೆ ತನ್ನ ಬದುಕಿನ ಕಹಿ ಘಟನೆಯ ನಡುವೆಯೂ ಕರ್ತವ್ಯ, ಸಾಮಾಜಿಕ ಪ್ರಜ್ಞೆ, ಮನೆ ಮತ್ತು ಕುಟುಂಬವನ್ನು ಯಶಸ್ವಿಯಾಗಿ ನಿಭಾಯಿಸುವ ಕಥಾಹಂದರವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.

ರಾಜ್ಯ ಸರ್ಕಾರದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಪ್ರಶಸ್ತಿ ದೊರೆತ್ತಿರುವ ಕುರಿತು ಹರ್ಷ ವ್ಯಕ್ತಪಡಿಸಿದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅವರು, ರಾಜ್ಯ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಕೊಡಗಿನ ಚಲನಚಿತ್ರ ಕೇತ್ರದಲ್ಲೇ ಮೊದಲ ಬಾರಿಗೆ ಇಷ್ಟ್ಟೊಂದು ಪ್ರಶಸ್ತಿಗಳನ್ನು ಬಾಚಿ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ನಾಡ ಪೆದ ಆಶಾ ಸಿನಿಮಾದಾಗಿದ್ದು, ಈ ಪ್ರಶಸ್ತಿಗಳು ನಮಗೆ ಸ್ಫೂರ್ತಿಯನ್ನು ತುಂಬಿವೆ. ಸಿನಿಮಾ ರಂಗದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಿದೆ. ಚಿತ್ರೀಕರಣಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಮತ್ತೊಬ್ಬ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಪ್ರತಿಕ್ರಿಯಿಸಿ, ಮಹಿಳಾ ಪ್ರಧಾನವಾದ ನಾಡ ಪೆದ ಆಶಾ ಚಿತ್ರವನ್ನು ಮಹಿಳೆಯರೇ ಸೇರಿ ನಿರ್ಮಿಸಿದ್ದೇವೆ. ರಾಜ್ಯ ಸರ್ಕಾರದ ಪ್ರಶಸ್ತಿ ದೊರೆತ್ತಿರುವುದರಿಂದ ನಮ್ಮ ಸಿನಿ ಪಯಣಕ್ಕೆ ಮತ್ತಷ್ಟು ಉತ್ತೇಜನ ದೊರೆತ್ತಂತಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net