ರಾಜ್ಯದಲ್ಲಿ 1 ಕೋಟಿ ಟನ್ ಸಕ್ಕರೆ ಸಂಗ್ರಹ

0000
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಕಾರ್ಮಿಕರು ಸಚಿವ ಶಿವರಾಮ್ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು. ಇಲಾಖೆಯ ಆಯುಕ್ತ ಅಕ್ರಮ ಪಾಷಾ, ಆರ್.ಬಿ. ಖಾಂಡಗಾವೆ, ವೆಂಕಟೇಶ ಶಿಂದಿಹಟ್ಟಿ, ಡಾ. ರಾಮಚಂದ್ರ ಗೌಡ ಇದ್ದರು.
Published on

ಬೆಳಗಾವಿ: ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ 1ಕೋಟಿ ಟನ್ ಸಕ್ಕರೆ ಸಂಗ್ರಹವಿದೆ. ಆದರೆ, ಕೇಂದ್ರ ಸರ್ಕಾರವು ಕೋವಿಡ್-19 ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಸಕ್ಕರೆ ರಪ್ತು ಮಾಡಲು ಅನುಮತಿ ನೀಡಿಲ್ಲ ಎಂದು ಸಕ್ಕರೆ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಬೆಳಗಾವಿ ನಗರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆದ ಆಡಳಿತ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಈ ಬಾರಿ 10,900 ಕೋಟಿ ರೂ. ಬೆಲೆಯ ಕಬ್ಬು ಬೆಳೆಯಲಾಗಿದೆ. 10,760 ಕೋಟಿ ರೂ.ವನ್ನು ರೈತರಿಗೆ ಪಾವತಿಸಲಾಗಿದೆ. ಕೇವಲ ಶೇ. 1ರಷ್ಟು ಮಾತ್ರ ಕಬ್ಬಿನ ಹಣ ಪಾವತಿಸುವುದು ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಬಾಕಿ ಪಾವತಿ ಆಗಲಿದೆ. ಅಲ್ಲದೆ, ಶೀಘ್ರದಲ್ಲಿ ಕಬ್ಬಿನ ಬೆಲೆ ನಿಗದಿ ಮಾಡಲಾಗುವುದು ಎಂದು ಹೇಳಿದರು.

ರಾಸಾಯನಿಕ ಗೊಬ್ಬರ ಬಳಸಬೇಡಿ: ಕಬ್ಬು ಬೆಳೆಗಾರರು ಮಿತಿಮೀರಿ ರಾಸಾಯನಿಕ ಗೊಬ್ಬರ ಬಳಸುತ್ತಿರುವುದರಿಂದ ಭೂಮಿಯ ಜೀವಸತ್ವ ಹಾಳಾಗುತ್ತಿದೆ. ಅಲ್ಲದೆ, ರೈತರ ಆರ್ಥಿಕತೆಯ ಮೇಲೂ ಪೆಟ್ಟು ಬೀಳುತ್ತಿದೆ. ಹೀಗಾಗಿ ರೈತರು ಇಲಾಖೆಯ ಮಾರ್ಗಸೂಚಿ ಅನುಸರಿಸಿ ಕೃಷಿ ಕಾರ್ಯ ಕೈಗೊಳ್ಳಬೇಕು. ರೈತರು ಹೊಸ ಹೊಸ ತಳಿಗಳನ್ನು ಉತ್ಪಾದನೆ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಕಬ್ಬು ಬೆಳೆಯುವುದನ್ನು ಕಲಿಯಬೇಕು ಎಂದರು.

ರೈತರಿಗೆ ನಷ್ಟ: ಬೆಳೆಯುವ ಕಬ್ಬಿನ ಇಳುವರಿಯೂ ಹೆಚ್ಚಾಗಬೇಕು. ಅಲ್ಲದೆ, ಆ ಕಬ್ಬುಗಳಿಂದ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಬೇಕು ಎನ್ನುವುದು ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ಉದ್ದೇಶವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಕಬ್ಬು ಬೆಳೆಗಾರರು ಹಾಗೂ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಇನ್ನುಳಿದ ಬೆಳೆಗಾರರು ತಮ್ಮ ಜೀವನದ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಸಕ್ಕರೆ ಇಲಾಖೆಯ ಆಯುಕ್ತ ಅಕ್ರಮ ಪಾಷಾ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಆರ್.ಬಿ. ಖಾಂಡಗಾವೆ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಆರ್‌ಸಿಯು ಕುಲಪತಿ ಡಾ. ರಾಮಚಂದ್ರ ಗೌಡ, ಚುನಾಯಿತ ಸದಸ್ಯ ಅಶೋಕ ಪಾಟೀಲ ಇನ್ನಿತರರು ಇದ್ದರು.

ನಕಲಿ ಕಾರ್ಮಿಕ ಕಾರ್ಡ್‌ಗೆ ಕಡಿವಾಣ: ಕಾರ್ಮಿಕರ ಕಾರ್ಡ್‌ಗಳು ದುರುಪಯೋಗ ಆಗುತ್ತಿದ್ದು, ಇದರಿಂದ ಅರ್ಹ ಕಾರ್ಮಿಕರಿಗೆ ಮೋಸ ಆಗುತ್ತಲಿದೆ. ಇದರಿಂದಾಗಿ ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ತೊಡಕಾಗುತ್ತಲಿದೆ. ನಕಲಿ ಕಾರ್ಡ್ ಮಾಡಿಕೊಡುವುದು ದೊಡ್ಡ ಉದ್ಯೋಗವಾಗಿ ಬೆಳೆಯುತ್ತಲಿದೆ. ಹೀಗಾಗಿ ಕಾರ್ಮಿಕರ ನಕಲಿ ಕಾರ್ಡ್ ತಯಾರಿಸುವ ಜಾಲ ಪತ್ತೆ ಹಚ್ಚಲು ಮುಂದಾಗಿದ್ದೇವೆ. ಕೋವಿಡ್-19 ಹಿನ್ನೆಲೆಯಲ್ಲಿ ಪರಿಹಾರ ಧನದ ರೂಪದಲ್ಲಿ ಕಾರ್ಮಿಕರಿಗೆ 5,000 ರೂ.ಘೋಷಣೆ ಮಾಡಿದಾಗ ಹಾವೇರಿ ಜಿಲ್ಲೆಯೊಂದರಲ್ಲೇ 30 ಸಾವಿರ ಕಾರ್ಮಿಕರು ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇದೇ ರೀತಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನಕಲಿ ಕಾರ್ಮಿಕರು ಹುಟ್ಟಿಕೊಂಡಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕುತ್ತೇನೆ ಎಂದು ಸಚಿವ ಹೆಬ್ಬಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net