

ರೋಣ: ಪ್ರೌಢಶಾಲೆಗಳ ಮಕ್ಕಳಿಗೆ ನೀಡುವ ಹೆಚ್ಚುವರಿ ತರಗತಿಗಳನ್ನು ಪ್ರಾಥಮಿಕ ಶಾಲೆಗಳಿಂದಲೇ ಆರಂಭಿಸಬೇಕು ಎಂದು ತಾಪಂ ಆಡಳಿತಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಹೇಳಿದರು.
ತಾಪಂ ಸಭಾಭವನದಲ್ಲಿ ಶುಕ್ರವಾರ ಕರೆಯಲಾದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಮಣ್ಣ ಪೂಜಾರ ಮಾತನಾಡಿ, ರೋಣ ಪಟ್ಟಣದಿಂದ ಕೆಇಬಿ ಗ್ರಿಡ್‌ವರೆಗೆ 900 ಸಸಿಗಳನ್ನು ನೆಡಲಾಗಿದೆ. ಆದರೆ, ದನಕರು ಅಥವಾ ರೈತರು ಕಸಕ್ಕೆ ಬೆಂಕಿ ಹಚ್ಚುವುದಿಂದ ಸಸಿಗಳು ಹಾಳಾಗುತ್ತಿವೆ. ರೈತರಿಗೆ ಎಷ್ಟೇ ತಿಳಿವಳಿಕೆ ಹೇಳಿದರೂ ಬೆಂಕಿ ಹಚ್ಚುವ ಕೆಲಸ ನಿಲ್ಲಿಸುತ್ತಿಲ್ಲ ಎಂದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗಿರೀಶ ಹೊಸೂರ ಮಾತನಾಡಿ, ದಾಳಿಂಬೆ, ನುಗ್ಗೆ, ಜೇನು ಡಬ್ಬಿಗೆ ಸಹಾಯಧನ, ತಾಳೆ ಬೆಳೆ ಅಭಿವೃದ್ಧಿಗೆ ಸಹಾಯಧನ ಸೇರಿದಂತೆ ಇಲಾಖೆಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಆರ್.ಎನ್. ನಾಯ್ಕರ ಮಾತನಾಡಿ, ತಾಲೂಕಿನ ಕೆಲವು ಶಾಲೆಗಳಲ್ಲಿ ಸಿಹಿ ಬೋಜನ ಕಾರ್ಯಕ್ರಮ ಆಯೋಜಿಸಲಾಗಿದೆ. ಊರಿನಲ್ಲಿ ಯಾರದಾದರು ಜನ್ಮದಿನ, ಮದುವೆ ಹೀಗೆ ಏನಾದರೂ ಕಾರ್ಯಕ್ರಮ ನಡೆದರೇ ಆ ಊರಲ್ಲಿನ ಶಾಲೆಗಳ ಮಕ್ಕಳ ಜನಸಂಖ್ಯೆ ಹೊಂದಾಣಿಕೆ ಮಾಡಿಕೊಂಡು ಅಲ್ಲಿ ಅಡುಗೆ ತಯಾರಿಸಲಾಗುತ್ತದೆ ಇದಕ್ಕೆ ಸಿಹಿ ಬೋಜನ ಎಂದು ಹೆಸರಿಸಲಾಗಿದೆ ಎಂದರು.
ಬಿಸಿಎಂ ಅಧಿಕಾರಿ ಚನ್ನಪ್ಪ ಕಲಕೇರಿ ಅವರು ಇಲಾಖೆಯ ವರದಿ ಮಂಡಿಸುವ ವೇಳೆ ಮಧ್ಯಪ್ರವೇಶಿಸಿದ ತಾಪಂ ಆಡಳಿತಾಧಿಕಾರಿ ನಂದಾ ಅವರು, ನರೇಗಲ್‌ನ ಬಿಸಿಎಂ ವಸತಿ ನಿಲಯದ ಕಟ್ಟಡದಲ್ಲಿ ಕೆಳಗೆ ಮಕ್ಕಳು ವಾಸವಿದ್ದರೆ ಮೇಲೆ ಕಟ್ಟಡ ನಿರ್ಮಾಣವಾಗುತ್ತಿದೆ. ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಕಳ್ಳಬಟ್ಟಿ 6 ಪ್ರಕರಣ
ರೋಣ ಅಬಕಾರಿ ನಿರೀಕ್ಷಕರ ವಲಯದಲ್ಲಿ ಅಂದರೆ ಗಜೇಂದ್ರಗಡ ತಾಲೂಕಿನಲ್ಲಿ ಒಟ್ಟು 6 ಕಳ್ಳಬಟ್ಟಿ ಪ್ರಕರಣ ದಾಖಲಿಸಲಾಗಿದೆ. ಕಳ್ಳಬಟ್ಟಿ ಸಂಪೂರ್ಣ ನಿರ್ಮೂಲನೆಯೇ ಇಲಾಖೆಯ ಗುರಿಯಾಗಿದೆ ಎಂದು ಅಬಕಾರಿ ಇಲಾಖೆ ಮುಖ್ಯ ಪೇದೆ ಆರ್.ಕೆ. ಗೌಡರ ಮಾಹಿತಿ ನೀಡಿದರು.
ಹೊರಗಿನವರಿಗೆ ಯೂರಿಯಾ ಮಾರಾಟ
ಕೃಷಿ ಇಲಾಖೆ ಅಧಿಕಾರಿ ಗೋಣಿಬಸಪ್ಪ ಮಾತನಾಡಿ, ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಇದೆ. ಪರ್ಯಾಯವಾಗಿ ನ್ಯಾನೋ ಲಿಕ್ವಿಡ್ ಬಳಸುವಂತೆ ರೈತರನ್ನು ಪ್ರೇರೇಪಿಸುತ್ತಿದ್ದೇವೆ ಎಂದರು. ‘ಯೂರಿಯಾ ಗೊಬ್ಬರ ಸೊಸೈಟಿಗೆ ಹಂಚಿಕೆಯಾಗಬೇಕು. ಬದಲಾಗಿ ಹೊರಗಿನ ಮಾರಾಟಗಾರರಿಗೆ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಿ’ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರ ಅಧಿಕಾರಿಗೆ ಸೂಚಿಸಿದರು.
ಅಬಕಾರಿ ನಿರೀಕ್ಷಕಿ ತರಾಟೆಗೆ ತಾಪಂ ಇಒ ಅವರಿಗೆ ಮಾಹಿತಿ ನೀಡದೇ ಸಭೆಗೆ ಗೈರಾದ ಅಬಕಾರಿ ನಿರೀಕ್ಷಕಿ ಶ್ರೀದೇವಿ ಕೊಳ್ಳಿ ಅವರನ್ನು ತಾಪಂ ಆಡಳಿತಾಧಿಕಾರಿ ತರಾಟೆಗೆ ತೆಗೆದುಕೊಂಡರು. ಅಬಕಾರಿ ಇಲಾಖೆ ಪ್ರಗತಿ ವರದಿಯನ್ನು ಮುಖ್ಯ ಪೇದೆ ಮಂಡಿಸಲು ಮುಂದಾದಾಗ ತಡೆದ ಅವರು, ಸಭೆಗೆ ಗೈರಾದ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಬೇಕೆಂಬ ವಿವೇಚನವೂ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ನೆಪ ಹೇಳದೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿದರು.
ಎಸ್‌ಸಿ, ಎಸ್‌ಟಿ ಮಕ್ಕಳಿಗೆ 1ನೇ ತರಗತಿಯಿಂದಲೇ ಇ ಕೆವೈಸಿ ಮಾಡಿಸಿ. ಇದರಿಂದ ಮಕ್ಕಳಿಗೆ ಸ್ಕಾಲರ್‌ಶಿಪ್ ಸಿಗಲು ಸಹಾಯಕವಾಗುತ್ತದೆ. ಅಧಿಕಾರಿಗಳು ತಡ ಮಾಡಿದಷ್ಟು ಮಕ್ಮಳಿಗೆ ಸ್ಕಾಲರ್‌ಶಿಪ್ ಸಿಗುವುದು ವಿಳಂಬವಾಗುತ್ತದೆ. ಡಾ. ನಂದಾ ಹಣಬರಟ್ಟಿ, ತಾಪಂ ಆಡಳಿತಾಧಿಕಾರಿ ರೋಣ