

ಪ್ರಶಾಂತ ಭಾಗ್ವತ, ಉಡುಪಿ
ಬೇಸಿಗೆಯ ರಜಾದಿನ ಕಳೆದು ಮತ್ತೆ ಶಾಲೆಗೆ ತೆರಳಲು ಮಕ್ಕಳು ಸಜ್ಜುಗೊಳ್ಳುತ್ತಿದ್ದು, ಜಿಲ್ಲಾದ್ಯಂತ ಎಲ್ಲ ಶಾಲೆಗಳೂ ಸಹ ಸಿದ್ಧತೆಯಲ್ಲಿ ತೊಡಗಿವೆ. ಮೇ 29ರಿಂದ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು, ಶಾಲೆಗೆ ಆಗಮಿಸಿದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲು ಶಿಕ್ಷಣ ಇಲಾಖೆ ಅಣಿಯಾಗಿದೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ಒಟ್ಟು 1,083 ಶಾಲೆಗಳಿದ್ದು, ತಾಲೂಕಿನ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆ ಸೇರಿದಂತೆ ಎಲ್ಲ ಮಾಧ್ಯಮಗಳ ಪುಸ್ತಕ ಹಂತಹಂತವಾಗಿ ಸರಬರಾಜಾಗುತ್ತಿವೆ.
ಜಿಲ್ಲೆಯಲ್ಲಿ ಈಗಾಗಲೇ ಮೇ 23ರ ವರೆಗೆ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಶೇ. 50.68 ಪುಸ್ತಕ ಹಾಗೂ ಖಾಸಗಿ ಶಾಲೆಗಳಿಗೆ ಮಾರಾಟ ರೂಪದಲ್ಲಿ ಶೇ.55.65 ಪಠ್ಯಪುಸ್ತಕವನ್ನು ತಾಲೂಕುಗಳ ಶಾಲೆಗಳಿಗೆ ವಿತರಿಸಲಾಗಿದೆ. ಉಚಿತ ಹಾಗೂ ಮಾರಾಟ ರೂಪದ ಒಟ್ಟು 17,87,410 ಪುಸ್ತಕಗಳಿಗೆ ಬೇಡಿಕೆ ಇಟ್ಟಿದ್ದು, 10,15,690 ಪುಸ್ತಕಗಳು ಪೂರೈಕೆ ಆಗಿವೆ. ಇದರಲ್ಲಿ 9,01,090 ಪುಸ್ತಕಗಳನ್ನು ಶಾಲೆಗಳಿಗೆ ವಿತರಣೆ ಮಾಡಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದು, ಮತ್ತೆ ಸರ್ಕಾರಿ ಶಾಲೆಗಳತ್ತ ಪಾಲಕರು ಹಾಗೂ ಮಕ್ಕಳನ್ನು ಸೆಳೆಯಲು ಜಿಲ್ಲಾ ಶಿಕ್ಷಣ ಇಲಾಖೆ ಆಂದೋಲನ ಹಮ್ಮಿಕೊಳ್ಳಲು ಮುಂದಾಗಿರುವುದಾಗಿ ತಿಳಿದುಬಂದಿದೆ. ಸರ್ಕಾರವೂ ಸಹ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸಿಎಸ್ಆರ್ಫಂಡ್ ಸಂಗ್ರಹದ ಮೂಲಕ ರಾಜ್ಯದಲ್ಲಿ 500 ಶಾಲೆ ಮೇಲ್ದರ್ಜೆಗೆ ಏರಿಸಿ, ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆರಂಭಿಸಲು ಮುಂದಾಗಿದೆ.
ಶಾಲೆ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ನಡೆಸುವಂತೆ ಜಿಲ್ಲಾ ಶಿಕ್ಷಣ ಇಲಾಖೆ ಈಗಾಗಲೇ ಎಲ್ಲ ಶಾಲೆಗಳಿಗೂ ಸೂಚನೆ ರವಾನಿಸಿದೆ. ಶಾಲೆ ಆರಂಭದ ಮೊದಲ ದಿನ ಎಲ್ಲ ವಿದ್ಯಾರ್ಥಿಗಳಿಗೂ ಸಿಹಿ ಬಿಸಿಯೂಟ ನೀಡಲಾಗುತ್ತಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿ ಇರುವುದರಿಂದ ಈ ಬಾರಿ ಶಾಲೆಯ ಪ್ರಾರಂಭೋತ್ಸವಕ್ಕೆ ಶಾಸಕ-ಸಚಿವರು ಅಥವಾ ಯಾವುದೇ ಜನಪ್ರತಿನಿಧಿಗಳನ್ನು ಆಹ್ವಾನಿಸುವಂತಿಲ್ಲ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಆಯಾ ಶಾಲೆಯ ಶಿಕ್ಷಕರು, ಪಾಲಕರಷ್ಟೇ ಪಾಲ್ಗೊಳ್ಳಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಣಪತಿ ಕೆ. 'ವಿಜಯವಾಣಿ'ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಉಡುಪಿ ಜಿಲ್ಲೆಗೆ ಪೂರೈಸುವ ಪಠ್ಯಪುಸ್ತಕಗಳನ್ನು ಈಗಾಗಲೇ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಉಚಿತವಾಗಿ ಹಾಗೂ ಮಾರಾಟದ ರೂಪದಲ್ಲಿ ವಿತರಣೆ ಮಾಡಲಾಗಿದೆ. ಇನ್ನೂ ಪುಸ್ತಕಗಳು ಪೂರೈಕೆ ಆಗುತ್ತಿದ್ದು, ವಿತರಣೆ ಕಾರ್ಯ ಮುಂದುವರಿದಿದೆ. ವಿದ್ಯಾರ್ಥಿಗಳ ಸಮವಸ್ತ್ರ ಈ ವಾರದಲ್ಲಿ ಪೂರೈಕೆಯಾಗಲಿದೆ. ಗಣಪತಿ ಕೆ. ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ